ಭೋಪಾಲ್: ಮಧ್ಯಪ್ರದೇಶ ವೈದ್ಯಕೀಯ ಪ್ರವೇಶ, ನೇಮಕಾತಿ ಪರೀಕ್ಷೆ ಹಗರಣ (ವ್ಯಾಪಂ)ದಲ್ಲಿ ಮಧ್ಯ ಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್ ಆರೋಪಿ ನಂ.10. ಅವರ ವಿರುದ್ಧ ಕ್ರಿಮಿ ನಲ್ ಕೇಸು ದಾಖಲಾಗಿದ್ದರೂ ರಾಜ್ಯಪಾಲರಿಗಿರುವ ಸಾಂವಿಧಾನಿಕ ರಕ್ಷಣೆಯಿಂದಾಗಿ ರಾಮ್ ನರೇಶ್ ವಿಚಾರಣೆಯಿಂದ ದೂರವುಳಿದಿದ್ದಾರೆ. ರಾಮ್ ನರೇಶ್ ರೀತಿಯಲ್ಲೇ ಆರೋಪ ಎದುರಿಸುತ್ತಿದ್ದ ಉಳಿದ ಆರೋಪಿಗಳೆಲ್ಲ ಬಂಧನಕ್ಕೊಳಗಾಗಿದ್ದಾರೆ. ಏತನ್ಮಧ್ಯೆ, ಹಗರಣದಲ್ಲಿ ಎಫ್ ಐಆರ್ ದಾಖಲಾಗಿದ್ದರೂ ಅಧಿಕಾರದಲ್ಲಿ ಮುಂದುವರಿಯುತ್ತಿರುವ ರಾಜ್ಯಪಾಲ ಯಾದವ್‍ರನ್ನು ವಜಾ ಮಾಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಈ ಅರ್ಜಿಯ ಜತೆಯಲ್ಲೇ ವ್ಯಾಪಂ ಹಗರಣವನ್ನು ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿ ಸಲ್ಲಿಕೆಯಾಗಿದ್ದ ಇನ್ನೆರಡು ಅರ್ಜಿಗಳೂ ವಿಚಾರಣೆಗೆ ಬರಲಿದೆ. ಇದರ ಜತೆಯಲ್ಲೇ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಅವರು ಸುಪ್ರೀಂಗೂ ಮನವಿ ಮಾಡಿದ್ದಾರೆ.