ಲಖನೌ: ಅಣ್ವಸ್ತ್ರ ಬಳಕೆ ಬಗ್ಗೆ ಪಾಕಿಸ್ತಾನ ರಕ್ಷಣಾ ಸಚಿವ ಖವಾಜ ಅಸೀಫ್ ನೀಡಿರುವ ಹೇಳಿಕೆಗೆ ಭಾರತ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪ್ರತಿಕ್ರಿಯಿಸಿದ್ದು, ತನ್ನ ಗಡಿಯನ್ನು ಸುರಕ್ಷಿತವಾಗಿಡಲು ಭಾರತಕ್ಕೆ ಸಾಮರ್ಥ್ಯವಿದೆ ಎಂದಿದ್ದಾರೆ.
ಪ್ರತಿಯೊಂದು ಪ್ರಶ್ನೆಗೂ ಉತ್ತರ ನೀಡಬೇಕಿಲ್ಲ. ನಾನು ಭಾರತದ ರಕ್ಷಣಾ ಸಚಿವನೇ ಹೊರತು ಪಾಕಿಸ್ತಾನದ ಸಚಿವನಲ್ಲ, ಗಡಿಗಳನ್ನು ಸುರಕ್ಷಿತವಾಗಿರಿಸುತ್ತೇವೆ ಎಂದಿದ್ದಾರೆ. ಅಣ್ವಸ್ತ್ರ ಪ್ರಯೋಗಿಸುವ ಕುರಿತು ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆಗೆ ಪತ್ರಕರ್ತರು ಮನೋಹರ್ ಪರಿಕ್ಕರ್ ಬಳಿ ಪ್ರತಿಕ್ರಿಯೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವರು ಹೇಳಿಕೆನೀಡಿದ್ದಾರೆ.
ನೆರೆಹೊರೆಯ ರಾಷ್ಟ್ರಗಳೊಂದಿಗಿನ ಸಂಬಂಧಕ್ಕೆ ಹುಳಿ ಹಿಂಡುವ ಹೇಳಿಕೆಯಲ್ಲಿ ಅಸ್ತಿತ್ವಕ್ಕೆ ಧಕ್ಕೆಯಾದಲ್ಲಿ ಪಾಕಿಸ್ತಾನ ಅಣ್ವಸ್ತ್ರಗಳನ್ನು ಬಳಸಲಿದೆ ಎಂದು ಪಾಕ್ ರಕ್ಷಣಾ ಸಚಿವ ಹೇಳಿಕೆ ನೀಡಿದ್ದರು. ಇದೇ ವೇಳೆ ಮಯನ್ಮಾರ್ ಮಾದರಿಯ ದಾಳಿಗಳನ್ನು ನಡೆಸುವ ಬಗ್ಗೆ ಮಾಹಿತಿ ನೀಡಲು ಮನೋಹರ್ ಪರಿಕ್ಕರ್ ನಿರಾಕರಿಸಿದ್ದಾರೆ. ಮಯನ್ಮಾರ್ ಮಾದರಿಯ ದಾಳಿ ನಡೆಸುವುದು ಗೌಪ್ಯ ಮಾಹಿತಿಯಾಗಿದ್ದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.