ನವದೆಹಲಿ: ಬಾಂಬ್ ಇಡಲಾಗಿದೆ ಎಂದು ವ್ಯಕ್ತಿಯೊಬ್ಬನಿಂದ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಜೆಯಿಂದ ಭದ್ರತೆ ಹೆಚ್ಚಿಸಲಾಗಿದೆ.
ಬಾಂಬ್ ಅನ್ನು ಯಾವ ಸ್ಥಳದಲ್ಲಿ ಇಡಲಾಗಿದೆ ಎಂಬ ಬಗ್ಗೆ ಕರೆ ಮಾಡಿದ ವ್ಯಕ್ತಿ ತಿಳಿಸಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರ ಸಂಜೆ ಸುಮಾರು 5.35ರ ಹೊತ್ತಿನಲ್ಲಿ ವಿಮಾನ ನಿಲ್ದಾಣದ ದೂರವಾಣಿ ಕೇಂದ್ರಕ್ಕೆ ಕರೆ ಕರೆ ಬಂತು. ಕರೆ ಬಂದ ಸಂಖ್ಯೆ ಆಸ್ಟ್ರೇಲಿಯಾ ದೇಶದ್ದಾಗಿದೆ ಎಂದು ಗೊತ್ತಾಗಿದೆ.
ವಿಮಾನ ನಿಲ್ದಾಣದ ಸುತ್ತಮುತ್ತ ಭದ್ರತಾ ಪಡೆ ಶೋಧ ನಡೆಸಿದ್ದು, ಬೆದರಿಕೆ ಕರೆಯು ಸುಳ್ಳಾಗಿರಲೂಬಹುದು ಎಂದು ಬಾಂಬ್ ಬೆದರಿಕೆ ಪರಿಶೀಲನಾ ಸಮಿತಿ ತಿಳಿಸಿದೆ.