ದೇಶ

ಆ ಮನೆಯಲ್ಲಿ ತಂತಾನೆ ಬೆಂಕಿ ಹೊತ್ತಿಕೊಳ್ಳುತ್ತೆ!

ಶಿಮ್ಲಾ: ಇದು ಯಾವ ಹಾರರ್ ಚಿತ್ರಕ್ಕೂ ಕಮ್ಮಿಯಿಲ್ಲದ ನಿಗೂಢತೆ ಹೊಂದಿರುವ ನೈಜಘಟನೆ. ಹಾರರ್ ಚಿತ್ರಕ್ಕೆ ಸರಕಾಗಬಲ್ಲ ಎಲ್ಲ ವೈಚಿತ್ರ್ಯಗಳೂ ಇದರಲ್ಲಿವೆ. ಆದರೆ ಘಟನೆಯಲ್ಲಿ ದಿನಾ ಹೆದರಿ ಹೆದರಿ ಸಾಯುತ್ತಿರುವವರ,  ನಿದ್ರೆರಹಿತ ರಾತ್ರಿಗಳನ್ನು ಕಳೆಯುತ್ತಿರುವವರ, ಅನಾಹುತದಿಂದ ನಷ್ಟಕ್ಕೊಳಗಾಗುತ್ತಿರುವ ಕಷ್ಟ ಮಾತ್ರ ಹೇಳತೀರದು.

ಬಿಲಾಸ್ಪುರ ಜಿಲ್ಲೆಯ ಬಾಡಿ ಎಂಬ ಗ್ರಾಮ. ಅಲ್ಲಿ ಒಬ್ಬ ನಿವೃತ್ತ ಸರ್ಕಾರಿ ನೌಕರನ ಮನೆ. ಆ ಮನೆಯಲ್ಲಿ ಇರುವ ವಸ್ತುಗಳಿಗೆ ತಂತಾನೇ ಬೆಂಕಿ ಹೊತ್ತಿಕೊಳ್ಳುತ್ತದೆ. ಇದು ಒಂದು ದಿನದ ಕಥೆಯಲ್ಲ. ಪದೇಪದೆ ಬೆಂಕಿ ಅನಾಹುತವಾಗುತ್ತಲೇ ಇರುತ್ತದೆ. ಪೊಲೀಸ್ ಅಧಿಕಾರಿಗಳು, ಫೊರೆನ್ಸಿಕ್ ತಜ್ಞರು ಇದಕ್ಕೆ ಕಾರಣ ಕಂಡುಹಿಡಿಯಲು ಹರಸಾಹಸ ಪಟ್ಟಿದ್ದಾರೆ. ಆದರೆ ಅವರಿಗೂ ಬೆಂಕಿ ಹೇಗೆ ಹೊತ್ತಿಕೊಳ್ಳುತ್ತೆ, ಎಲ್ಲಿ ಹೊತ್ತಿಕೊಳ್ಳುತ್ತೆ ಎಂಬುದನ್ನು ಪತ್ತೆಹಚ್ಚಲಾಗಿಲ್ಲ.

ಕಳೆದ ವರ್ಷ ಸೆ.10ರಂದು ಮೊದಲ ಬಾರಿ ಅಗ್ನಿ ಆಕಸ್ಮಿಕ ಸಂಭವಿಸಿದಾಗ ಪೂಜೆ, ಶಾಂತಿ, ಹೋಮ ಅಂತೆಲ್ಲ ಮಾಡಿದರು. ಇಷ್ಟಾದರೂ ಅಗ್ನಿ ಆಕಸ್ಮಿಕ ನಿಂತಿಲ್ಲ ಎಂದು ಗ್ರಾಮಸ್ಥರೇ ಹೇಳುತ್ತಿದ್ದಾರೆ. ಇದಕ್ಕಿಂತ ಭಯಾನಕ ಅಂದ್ರೆ, ಬೆಂಕಿ ಆರಿಸಲು ಮನೆಮಂದಿಯೆಲ್ಲ ಕಷ್ಟಪಡುತ್ತಿದ್ದರೆ, ಗೋಡೆ ಮೇಲೆ ಈ ಮನೆ ಬಿಟ್ಟು ಹೊರಡಿ, ಇಲ್ಲವಾದರೆ ಎಲ್ಲರನ್ನೂ ಕೊಲ್ಲುತ್ತೇನೆ ಎಂದು ಬರೆದದ್ದು ಕಾಣಿಸಿದೆ.

ಪೊಲೀಸರು ಇದರ ಸತ್ಯಾಸತ್ಯತೆ ಕಂಡು ಹಿಡಿಯಲು ಮತ್ತು ಅಪಾಯ ತಪ್ಪಿಸಲು ಒಬ್ಬ ಪೇದೆಯನ್ನೂ ನೇಮಿಸಿದ್ದಾರೆ. ಆದರೆ ಆತನ ಉಪಸ್ಥಿತಿಯಲ್ಲೂ ಬೆಂಕಿಘಟನೆ ಮರುಕಳಿಸಿದೆ. ಬೆಂಕಿ ಎಷ್ಟು ಹೊತ್ತಿಗೆ ಹೊತ್ತಿಕೊಳ್ಳುತ್ತದೋ ಎಂಬ ಭಯದಿಂದ ಪ್ರತಿ ರಾತ್ರಿ ಮನೆಯಲ್ಲಿ ಒಬ್ಬರು ಜಾಗರಣೆ ಮಾಡುತ್ತ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲ, ಮಂಚದ ಕೆಳಗೆ ಯಾವಾಗಲೂ ಒಂದಷ್ಟು ನೀರು ತುಂಬಿದ ಬಕೆಟ್ ತಯಾರಿಟ್ಟುಕೊಂಡೇ ಇರುವಂತಾಗಿದೆ.

ಮಕ್ಕಳಿಗೇನಾದರೂ ಆದರೆ ಎಂಬ ಆತಂಕದಿಂದ ಅವರನ್ನು ಬಂಧುಗಳ ಮನೆಯಲ್ಲಿರಿಸಲಾಗಿದೆ. ಊಟ ಮಾಡೋದು, ಬಟ್ಟೆ ಮುಂತಾದ ಬೆಲೆಬಾಳುವ ವಸ್ತುಗಳಿಗೂ ಬೇರೆಯವರ ಮನೆಯಲ್ಲೇ ಆಶ್ರಯವಾಗಿದೆ. ಗೋಡೆಮೇಲಿನ ಅಕ್ಷರ ಯಾರದೆಂಬ ಸುಳಿವೂ ಸಿಗದೆ, ಪೊಲೀಸರಿಗೂ ಬೆಂಕಿಯ ರಹಸ್ಯ ಬೇದಿಸಲಾಗದೆ ರಹಸ್ಯ ಇವತ್ತಿಗೂ ನಿಗೂಢವಾಗಿಯೇ ಉಳಿದಿದೆ.

SCROLL FOR NEXT