ಇಸ್ಲಾಮಾಬಾದ್: ಮುಂಬೈ ದಾಳಿ ತನಿಖೆ ಚುರುಕುಗೊಳಿಸುವುದಾಗಿ ಭರವಸೆ ನೀಡಿದ್ದ ಪಾಕಿಸ್ತಾನ ಇದೀಗ ಪ್ರಕರಣ ಕುರಿತಂತೆ ವಿಚಾರಣೆ ನಡೆಸಲು ಮತ್ತಷ್ಟು ಸಾಕ್ಷ್ಯಾಧಾರ ಅವಶ್ಯಕತೆಯಿದ್ದು, ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಭಾರತಕ್ಕೆ ಸೋಮವಾರ ಕೇಳಿದೆ.
ರಷ್ಯಾದ ಉಫಾ ನಗರಿಯಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ ಕುರಿತಂತೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಪಾಕಿಸ್ತಾನ ರಾಷ್ಟ್ರೀಯ ಭದ್ರತೆ ಸಲಹೆಗಾರ ಸರ್ತಾಜ್ ಅಜಿಜ್ ಅವರು, ಮುಂಬೈ ದಾಳಿ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಪಾಕಿಸ್ತಾನಕ್ಕೆ ಮತ್ತಷ್ಟು ಸಾಕ್ಷ್ಯಾಧಾರಗಳ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ನಡುವೆ ನಡೆದ ಚರ್ಚೆ ಅನೌಚಾರಿಕವಾಗಿದ್ದು, ಚರ್ಚೆಯಲ್ಲಿ ಯಾವುದೇ ರೀತಿಯ ಒಪ್ಪಂದಗಳಾಗಿಲ್ಲ. ಆದರೆ, ಮುಂಬೈ ದಾಳಿ ಕುರಿತಂತೆ ಮತ್ತಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಮೋದಿ ಅವರನ್ನು ನವಾಜ್ ಷರೀಫ್ ಕೇಳಿದ್ದರು ಎಂದು ಹೇಳಿದ್ದಾರೆ.