ಕೋಲ್ಕೊತಾ: ಬ್ಯಾಂಡೇಜ್ ತೆಗೆಯುವ ವೇಳೆ ನರ್ಸ್ ನಿರ್ಲಕ್ಷ್ಯದಿಂದಾಗಿ 8 ದಿನದ ನವಜಾತ ಶಿಶು ಹೆಬ್ಬೆರಳನ್ನು ಕಳೆದುಕೊಂಡ ಘಟನೆ ಪಶ್ಚಿಮ ಬಂಗಾಳದ ಕೊಲ್ಕೊತಾದ ಬಲೂರ್ಗತ್ ನಲ್ಲಿ ನಡೆದಿದೆ.
ಅತಿಸಾರ ಬೇಧಿಯಿಂದ ಬಳಲುತ್ತಿದ್ದ 8 ದಿನದ ಮಗುವನ್ನು ಬಲೂರ್ಗತ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ ಜುಲೈ 6 ರಂದು ದಾಖಲಿಸಲಾಗಿತ್ತು. ಮಗುವಿನ ಕಾಯಿಲೆ ಗುಣಮುಖವಾಗತೊಡಗಿದಾಗ ಮಗುವಿನ ಎಡಗೈಗೆ ಹಾಕಿದ್ದ ಬ್ಯಾಂಡೇಜ್ ತೆಗೆಯಲು ಬಂದ ನರ್ಸ್ ನಿರ್ಲಕ್ಷ್ಯದಿಂದ ಬ್ಯಾಂಡೇಜ್ ಜೊತೆ ಶಿಶುವಿನ ಹೆಬ್ಬೆರಳನ್ನು ಕತ್ತರಿಸಿದಳು. ತಕ್ಷಣವೇ ಮಗು ಜೋರಾಗಿ ಅಳತೊಡಗಿತು. ಈ ವೇಳೆ ನೆಲದ ಮೇಲೆ ಬಿದ್ದ ಹೆಬ್ಬೆರಳನ್ನು ಕಸದ ಬುಟ್ಟಿಗೆ ಎಸೆದು ಕತ್ತರಿಯನ್ನು ನೀರಿನಲ್ಲಿ ತೊಳೆದು ಆ ನರ್ಸ್ ಓಡಿ ಹೋದಳು. ಅನಂತರ ತಾನು ನನ್ನ ಪತಿಯನ್ನು ಕೂಗಿಕೊಂಡೆ ಎಂದು ಮಗುವಿನ ತಾಯಿ ದೂರಿದ್ದಾರೆ.
ಇನ್ನು ಈ ಸಂಬಂಧ ಮಗುವಿನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಮಗುವಿನ ಹೆಬ್ಬೆರಳು ಕತ್ತರಿಸಿದ ನರ್ಸ್ ಹೆಸರು ತಿಳಿಯದಿದ್ದರಿಂದ, ನರ್ಸ್ ಎಂದು ಹೆಸರು ನೀಡಿ ದೂರು ದಾಖಲಿಸಿದ್ದಾರೆ.
ಬೆರಳು ಕತ್ತರಿಸಿದ ನರ್ಸ್ ಹೆಸರು ರಾಖಿ ಸರ್ಕಾರ್ ಆಗಿದ್ದು. ಘಟನೆ ನಡೆದ ದಿನದಿಂದ ಆಕೆಯನ್ನು ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಆಸ್ಪತ್ರೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಟಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.