ದೇಶ

ಶಾ ಅಚ್ಛೇ ದಿನ್ ಹೇಳಿಕೆಗೆ ಟ್ವೀಟ್‍ಗಳ ಮಳೆ

Mainashree

ನವದೆಹಲಿ: ``ಅಚ್ಛೇ ದಿನ ಬರಲು ಇನ್ನೂ 25 ವರ್ಷಗಳು ಬೇಕು'' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ ಎನ್ನಲಾದ ವರದಿಯು ಟ್ವಿಟರ್‍ನಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿತು.

ಶಾ ಅವರು ಆ ರೀತಿ ಹೇಳಿಯೇ ಇಲ್ಲ. ಪತ್ರಿಕೆಯು ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಬಿಜೆಪಿ ಸ್ಪಷ್ಟನೆ ನೀಡಿದರೂ, ಪ್ರತಿಪಕ್ಷಗಳು ಮಾತ್ರ ಅಮಿತ್ ಶಾ ವಿರುದ್ಧ ಹರಿಹಾಯ್ದವು. ಭೋಪಾಲ್‍ನಲ್ಲಿ ಸೋಮವಾರ ಮಾತನಾಡಿದ್ದ ಶಾ, ಒಳ್ಳೆಯ ದಿನಗಳು ಬರಬೇಕೆಂದರೆ 25 ವರ್ಷಗಳು ಬೇಕು ಎಂದಿದ್ದರು ಎಂದು ಪತ್ರಿಕೆಯೊಂದು ಪ್ರಕಟಿಸಿತ್ತು.

ವರದಿ ಪ್ರಕಟವಾಗುತ್ತಿದ್ದಂತೆ ಟ್ವೀಟಿಗರಿಂದ ಟ್ವೀಟ್‍ಗಳ ಸುರಿಮಳೆಯೇ ಸುರಿಯಿತು. ಕೆಲವರು ವ್ಯಂಗ್ಯ ಮಾಡಿದರೆ, ಕೆಲವರು ಶಾರನ್ನು ಸಮರ್ಥಿಸಿಕೊಂಡಿದ್ದು ಕಂಡು ಬಂತು. ``ಅಚ್ಛೇ ದಿನ್ ಎನ್ನುವುದು ಡಯಲ್ ಅಪ್‍ನಲ್ಲಿ ಫೈಲ್ ಡೌನ್ ಲೋಡ್ ಮಾಡಿದಂತೆ. ಮೊದಲಿಗೆ 2 ದಿನ 5 ಗಂಟೆಗಳು ಬಾಕಿ, ನಂತರ 53 ಸೆಕೆಂಡುಗಳು ಬಾಕಿ.. ನಂತರ 25 ವರ್ಷಗಳು ಬಾಕಿ ಎಂದು ಒಬ್ಬರು ವ್ಯಂಗ್ಯವಾಡಿದರೆ, ಮತ್ತೊಬ್ಬರು ಶಾಗಿರುವ ಒಂದೇ ಒಂದು ಆಯ್ಕೆಯೆಂದರೆ ಮೋದಿಯ ಹೆಸರನ್ನು ಅಚ್ಛೇ ದಿನ್ ಎಂದು ಬದಲಿಸುವುದು. ಆಗ ಪ್ರಧಾನಿ ವಿದೇಶ ಪ್ರವಸಾದಿಂದ ವಾಪಸ್ ಬರುವಾಗಲಾದರೂ ನಾವು ಅಚ್ಛೇ ದಿನ್ ಆನೇ ವಾಲೆ ಹೇ ಎಂದು ಹೇಳಬಹುದು ಎಂದಿದ್ದಾರೆ. ಇನ್ನೊಬ್ಬರು ಪತ್ರಿಕೆಯ ವರದಿಯೇ ತಪ್ಪು. ಭಾರತ ವಿಶ್ವದಲ್ಲೇ ನಂ.1 ಆಗಲು 25 ವರ್ಷ ಬೇಕೆಂದು ಶಾ ಹೇಳಿದ್ದರು ಎಂದಿದ್ದಾರೆ.

SCROLL FOR NEXT