ವಾರಾಣಸಿ: ಮಳೆಯ ಕಾರಣದಿಂದಾಗಿ ಕಳೆದ ಒಂದು ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಾರಾಣಸಿ ಭೇಟಿ ಎರಡು ಬಾರಿ ರದ್ದುಗೊಂಡಿರುವುದರಿಂದ ಬರೋಬ್ಬರಿ 17 ಕೋಟಿ ರೂಪಾಯಿ ಕೊಚ್ಚಿಹೋಗಿದೆ.
ಸ್ಥಳೀಯ ಜಿಲ್ಲಾಡಳಿತ ಹಾಗೂ ಶಿಷ್ಟಾಚಾರದ ಅಧಿಕಾರಿಗಳ ಮಾಹಿತಿ ಪ್ರಕಾರ, ಮೋದಿ ಭೇಟಿ ರದ್ದಾದ ಹಿನ್ನೆಲೆಯಲ್ಲಿ ಬೊಕ್ಕಸಕ್ಕೆ 17 ಕೋಟಿಗಿಂತಲೂ ಹೆಚ್ಚು ಖರ್ಚಾಗಿದೆ ಎಂದು ತಿಳಿದುಬಂದಿದೆ. ವಾರಾಣಸಿಗೆ ಭೇಟಿ ನೀಡಬೇಕಿದ್ದ ಮೋದಿ ಜು.28 ರಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬೇಕಿತ್ತು ಕಾರ್ಯಕ್ರಮದ ಆಯೋಜಕರು ಜರ್ಮನ್ ಹ್ಯಾಂಗರ್ ಮಾದರಿಯ ಮಾರ್ಕ್ಯೂಗಳನ್ನು ನಿಲ್ಲಿಸುವುದು ಸೇರಿದಂತೆ ಭರ್ಜರಿ ಸಿದ್ಧತೆ ನಡೆಸಿದ್ದರು. ಈ ಮಾರ್ಕ್ಯೂಗಳು ಬೆಂಕಿ ಮತ್ತು ಜಲನಿರೋಧಕವಾಗಿದ್ದರಿಂದ ಇದಕ್ಕೆ 9 ಕೋಟಿ ರೂಪಾಯಿ ವೆಚ್ಚವಾಗಿದೆ.
ಇನ್ನು ಮೋದಿ ಹಾಗೂ ಸಹಚರರ ಬಳಕೆಗಾಗಿ ನವದೆಹಲಿಯಿಂದ ಹವಾನಿಯಂತ್ರಿತ ಸಂಚಾರಿ ಶೌಚಾಲಯಗಳನ್ನು ತರಿಸಲಾಗಿತ್ತು. ದೆರೇಕ ಮೈದಾನದಲ್ಲಿ ಒಟ್ಟು ಟನ್ ಗಳ ಹವಾನಿಯಂತ್ರಕಗಳನ್ನು, 125 ಕಿಲೋವ್ಯಾಟ್ ವಿದ್ಯುತ್ ನೀಡುವ 10 ವಿಶೆಷ ಜನರೇಟರ್ ಗಳನ್ನು ಅಳವಡಿಸಲಾಗಿತ್ತು ಎಂದು ಕಾರ್ಯಕ್ರಮದ ಆಯೋಜಕರೊಬ್ಬರು ಮಾಹಿತಿ ನೀಡಿದ್ದಾರೆ ಇದಕ್ಕಾಗಿ ಹೆಚ್ಚು ಹಣ ಖರ್ಚಾಗಿದೆ. ಇದನ್ನು ಹೊರತುಪಡಿಸಿ ವಸತಿ, ಸಾರಿಗೆ ವ್ಯವಸ್ಥೆ ಕಲ್ಪಿಸಲು ಹಾಗೂ ಪ್ರಧಾನಿಯ ಎಸ್.ಪಿ.ಜಿ ಭದ್ರತೆಯ ಇತರ ಕಾರ್ಯಗಳಿಗೆ 4 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ತಿಳಿದುಬಂದಿದೆ.
ಇವೆಲ್ಲದರೊಂದಿಗೆ, ಮೋದಿ ಭಾಗವಹಿಸಲಿದ್ದ ಪ್ರದೇಶದ ಹಿಂಭಾದಲ್ಲಿ ವೈಫೈ ಸೌಲಭ್ಯ ಹೊಂದಿರುವ ಮಿನಿ-ಪಿ.ಎಂ.ಒ(ಪ್ರಧಾನಿ ಕಾರ್ಯಾಲಯ) ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವುದನ್ನು ಪ್ರಸಾರ ಮಾಡಲು 15 ಎಲ್ಇಡಿ ಸ್ಕ್ರೀನ್ ಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದಲ್ಲದೇ ಕಾರ್ಯಕ್ರಮ ನಡೆಯಲಿದ್ದ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಉನ್ನತ ಗುಣಮಟ್ಟದ ಸೌಂಡ್ ಸಿಸ್ಟಮ್ ಸೇರಿದಂತೆ ದುಬಾರಿ ವ್ಯವಸ್ಥೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ.