ದೇಶ

ಲೈಂಗಿಕ ಸಂತ್ರಸ್ತೆಯರಿಗೆ 3 ತಿಂಗಳು ವೇತನ ಸಹಿತ ರಜೆ

Sumana Upadhyaya

ನವದೆಹಲಿ: ಸರ್ಕಾರಿ ಉದ್ಯೋಗದಲ್ಲಿದ್ದು ಲೈಂಗಿಕ ಕಿರುಕುಳಕ್ಕೆ ಒಳಗಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಹಿಳೆಯರಿಗೆ ಅಥವಾ ಯುವತಿಯರಿಗೆ ಮೂರು ತಿಂಗಳ ವೇತನಸಹಿತ ರಜೆ ನೀಡಲು ಮತ್ತು ಅವರನ್ನು ಬೇರೆ ಇಲಾಖೆಗೆ ವರ್ಗಾಯಿಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದಂತಹ ಪ್ರಕರಣಗಳನ್ನು ಲಘುವಾಗಿ ಪರಿಗಣಿಸಬಾರದು. ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶಿಸ್ತು ಸಮಿತಿಗೆ ಆದೇಶ ನೀಡಲಾಗಿದೆ.

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ಪತ್ತೆಹಚ್ಚಿ ಅನ್ಯಾಯವಾದವರಿಗೆ ನ್ಯಾಯ ದೊರಕಿಸಿಕೊಡುವುದು ಶಿಸ್ತು ಸಮಿತಿಯ ಕೆಲಸವಾಗಿದೆ. ವಿಚಾರಣೆ ಸಮಯದಲ್ಲಿ ನೌಕರರ ರಜೆಯನ್ನು ಕಡಿತಗೊಳಿಸದೆ ಮೂರು ತಿಂಗಳವರೆಗೆ ವೇತನಸಹಿತ ರಜೆ ನೀಡಬೇಕೆಂದು, ಅನ್ಯಾಯಕ್ಕೊಳಗಾದ ಮಹಿಳೆ ಅಥವಾ ಆರೋಪಿ ಪುರುಷನನ್ನು ಬೇರೆ ಇಲಾಖೆಗೆ ವರ್ಗಾಯಿಸುವ ಅಧಿಕಾರ ಸಮಿತಿಗೆ ಇದೆ.

ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕುರಿತು ವಿಶಾಖಾ ಮಾರ್ಗಸೂಚಿ ಪ್ರಕಾರ, ಸುಪ್ರೀಂಕೋರ್ಟ್ ನ ತೀರ್ಪನ್ನು ಆಧರಿಸಿ ದೂರು ಸಮಿತಿಯನ್ನು ಎಲ್ಲಾ ಸಚಿವಾಲಯ ಮತ್ತು ಸಂಘಗಳಡಿಯಲ್ಲಿ ಸ್ಥಾಪಿಸಲಾಗಿದ್ದು, ಇದರ ನೇತೃತ್ವವನ್ನು ಮಹಿಳೆ ವಹಿಸಿಕೊಳ್ಳಲಿದ್ದಾರೆ ಮತ್ತು ಸಮಿತಿಯ ಅರ್ಧದಷ್ಟು ಸದಸ್ಯರು ಮಹಿಳೆಯರಾಗಿರುತ್ತಾರೆ.

SCROLL FOR NEXT