ನವದೆಹಲಿ: ಇಬ್ಬರು ಸಹೋದರರಿಂದ ಭೀಕರವಾಗಿ ಹತ್ಯೆಗೈದ ದೆಹಲಿಯ 19 ವರ್ಷದ ಯುವತಿ ಮೀನಾಕ್ಷಿಯ ಪೋಷಕರು, ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.
ಸರ್ಕಾರ ಎಷ್ಟೇ ಪರಿಹಾರ ಕೊಟ್ಟರೂ ನಮ್ಮ ಮಗಳು ವಾಪಸ್ ಬರುವುದಿಲ್ಲ. ನಮಗೆ ನ್ಯಾಯ ಸಿಗಬೇಕು. ಅವರನ್ನು ನೇಣಿಗೇರಿಸಬೇಕೆಂದು ಮೀನಾಕ್ಷಿ ತಾಯಿ ಒತ್ತಾಯಿಸಿದ್ದಾರೆ.
ಮೀನಾಕ್ಷಿ ತಂದೆ ಮಾತನಾಡಿ, ಮಗಳ ಮೇಲೆ ನೆರೆಹೊರೆಯ ಯುವಕರು ನಿಂದನೆ ಮತ್ತು ಕೆಟ್ಟ ಶಬ್ದಗಳನ್ನು ಬಳಸಿ ಅವಹೇಳನ ಮಾಡುತ್ತಿದ್ದು, ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದರೂ ಪೊಲೀಸರು ಒಮ್ಮೆ ಬಂಧಿಸಿ ಬಿಟ್ಟುಬಿಟ್ಟಿದ್ದರು.ನಂತರ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿಯೇ ಇಂದು ನಮಗೆ ಈ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದ್ದಾರೆ.
ಈ ಮಧ್ಯೆ ಪ್ರಕರಣದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕಾನೂನು, ಸುವ್ಯವಸ್ಥೆ ಪರಿಸ್ಥಿತಿ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರು ಸೋಮವಾರ ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರ ಜೊತೆ ಚರ್ಚೆ ನಡೆಸಲಿದ್ದಾರೆ.
ಮೀನಾಕ್ಷಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಛೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ಭೇಟಿ ಮಾಡಲು ಇಚ್ಛಿಸುತ್ತಾರೆ ಎಂದು ಮುಖ್ಯಮಂತ್ರಿ ಸಚಿವಾಲಯ ಆಯುಕ್ತರಿಗೆ ಪತ್ರ ಬರೆದಿದೆ.
ನಿನ್ನೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಾ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಮೀನಾಕ್ಷಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು, ಈ ಪ್ರದೇಶದಲ್ಲಿ ಪೊಲೀಸ್ ಪಡೆ ಇರುವುದಿಲ್ಲ ಮತ್ತು ಈ ಘಟನೆಯಲ್ಲಿ ಕೆಲವು ಪೊಲೀಸರ ಕೈವಾಡ ಇರುವ ಸಾಧ್ಯತೆಯಿದೆ ಎಂದು ದೂರಿದ್ದಾರೆ.
ಮೃತ ಯುವತಿಯ ಕುಟುಂಬಕ್ಕೆ ಮುಖ್ಯಮಂತ್ರಿ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ.
ಇಂದು ದೆಹಲಿ ಪೊಲೀಸ್ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ಆಯುಕ್ತ ಬಿ.ಎಸ್.ಬಸ್ಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲ ಫಿರಂಗಿಗಳನ್ನು ಬಳಸಬೇಕಾಯಿತು.
ದೆಹಲಿಯ ಆನಂದ್ ಪರ್ಬಾತ್ ಪ್ರದೇಶದಲ್ಲಿ 19 ವರ್ಷದ ಯುವತಿ ಮೀನಾಕ್ಷಿ ಮೊನ್ನೆ ಗುರುವಾರ ತನ್ನ ತಾಯಿಯೊಂದಿಗೆ ಮಾರುಕಟ್ಟೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಆಕೆಯ ಅಡ್ಡಗಟ್ಟಿ ನೆರೆಮನೆಯವರಾದ ಜೈಪ್ರಕಾಶ್ ಮತ್ತು ಆತನ ಸಹೋದರ 35 ಬಾರಿ ಚಾಕುವಿನಿಂದ ತಿವಿದು ಹತ್ಯೆಗೈದಿದ್ದರು.
ಆರೋಪಿಗಳು ಈಕೆಯನ್ನು ಪದೇ ಪದೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದುದನ್ನು ಮೀನಾಕ್ಷಿ ಆಕ್ಷೇಪಿಸಿದ್ದರಿಂದ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮೀನಾಕ್ಷಿಯ ತಾಯಿಗೂ ಗಾಯಗಳಾಗಿದ್ದವು. ಆದರೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಇಬ್ಬರು ಯುವಕರಿಂದ ಮೀನಾಕ್ಷಿ ಹಲವು ಬಾರಿ ಕಿರುಕುಳಕ್ಕೆ ಒಳಗಾಗಿದ್ದಳು. 2013ರಲ್ಲಿ ಪೊಲೀಸರಿಗೆ ದೂರು ಸಹ ನೀಡಿದ್ದಳು ಎಂದು ಅವಳ ತಾಯಿ ಹೇಳಿದ್ದಾರೆ.ಪ್ರಕರಣದ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.