ದೇಶ

ಪ್ರಧಾನಿ, ಮುಖ್ಯಮಂತ್ರಿಗಳಿಗೆ ಜಾತಿ ಇಲ್ಲ: ಶರದ್ ಯಾದವ್

ಪಾಟ್ನ: ಜಾತಿ ಆಧಾರಿತ ಜನಗಣತಿ ವರದಿ ಕುರಿತಂತೆ ಈಗಾಗಲೇ ಎನ್ ಡಿಎ ಸರ್ಕಾರದ ವಿರುದ್ಧ ಹಲವಾರು ಟೀಕೆ ವ್ಯಕ್ತಪಡಿಸುತ್ತಿರುವ ಲಾಲೂ ಪ್ರಸಾದ್ ಯಾದವ್ ಹಾಗೂ ನಿತೀಶ್ ಕುಮಾರ್ ಅವರ ಜೊತೆ ಇದೀಗ ಜೆಡಿ(ಯು) ಅಧ್ಯಕ್ಷ ಶರದ್ ಯಾದವ್ ಕೂಡ ಕೈ ಜೊಡಿಸಿದ್ದು, ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಸಾಂವಿಧಾನಿಕ ಅಧಿಕಾರವಿರುವುದರಿಂದ ಅವರಿಗೆ ಜಾತಿ ಎಂಬುದಿರುವುದಿಲ್ಲ ಎಂದು ಹೇಳುವ ಮೂಲಕ ಶನಿವಾರ ವ್ಯಂಗ್ಯವಾಡಿದ್ದಾರೆ.

ಬಿಹಾರ ಚುನಾವಣೆ ಸೀಟು ಹಂಚಿಕೆ ವಿಚಾರ ಕುರಿತಂತೆ ಇಂದು ಪಾಟ್ನದಲ್ಲಿ ಮಾತನಾಡಿರುವ ಅವರು, ಸಾಂವಿಧಾನಿಕ ಅಧಿಕಾರವಿರುವವರೆಗೂ ಪ್ರಧಾನಮಂತ್ರಿಗಾಗಲಿ ಅಥವಾ ಮುಖ್ಯಮಂತ್ರಿಗಳಿಗೇ ಆಗಲಿ ಅವರಿಗೆ ಜಾತಿ ಇರುವುದಿಲ್ಲ. ಜಾತಿ ಆಧಾರಿತ ಜನಗಣತಿ ಕುರಿತಂತೆ ಈ ರೀತಿಯಾಗಿ ಚರ್ಚೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಕುರಿತಂತೆ ಲಾಲೂ ಪ್ರಸಾದ್ ಯಾದವ್ ಹಾಗೂ ನಿತೀಶ್ ಕುಮಾರ್ ಅವರು ಪ್ರತಿಭಟನೆ ನಡೆಸುತ್ತಿರುವುದರ ಕುರಿತಂತೆ ನನ್ನ ಬೆಂಬಲವಿದ್ದು, ಜು.27ರಂದು ನಡೆಯುವ ಪ್ರತಿಭಟನೆಯಲ್ಲಿ ನಾನು ಪಾಲ್ಗೊಳ್ಳಲಿದ್ದೇನೆ ಎಂದು ಹೇಳಿದ್ದಾರೆ.

ದೇಶದಲ್ಲಿ ಈಗಾಗಲೇ ಮಾಡಲಾಗಿರುವ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿಯ ಮಾಹಿತಿ ಬಿಡುಗಡೆ ಮಾಡಲು ಆಗ್ರಹಿಸಿ ಜುಲೈ.27 ರಂದು ಪ್ರತಿಭಟನೆ ನಡೆಸುವುದಾಗಿ ಲಾಲು ಪ್ರಸಾದ್ ಯಾದವ್‌ ಘೋಷಿಸಿದ್ದರು. ಇದೀಗ ತಮ್ಮ ಜಾತ್ಯತೀತ ಮೈತ್ರಿಯ ಗಟ್ಟಿತನವನ್ನು ಸಾಬೀತು ಪಡಿಸಲು ಲಾಲು ಜತೆ ಕೈ ಜೋಡಿಸಲು ಶರದ್ ಯಾದವ್ ಮುಂದೆ ಕೂಡ ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

SCROLL FOR NEXT