ವಾಷಿಂಗ್ಟನ್: ಗೋವಾ ಮತ್ತು ಗುವಾಹಟಿಯಲ್ಲಿ ಭಾರತ ಸರ್ಕಾರದ ಎರಡು ಯೋಜನೆಗಳನ್ನು ತನ್ನದಾಗಿಸಿಕೊಳ್ಳಲು ನ್ಯೂಜೆರ್ಸಿ ಮೂಲದ ಲೂಯಿಸ್ ಬರ್ಗರ್ ಎಂಬ ನಿರ್ಮಾಣ ಸಂಸ್ಥೆ ಭಾರತದ ಸಚಿವರು ಮತ್ತು ಅಧಿಕಾರಿಗಳಿಗೆ ಕೋಟ್ಯಂತರ ರುಪಾಯಿ ಲಂಚ ನೀಡಿದ ವಿಚಾರ ಇದೀಗ ಬಹಿರಂಗವಾಗಿದೆ.
ಇದಕ್ಕಾಗಿ ಕಂಪನಿಯ ಇಬ್ಬರು ಅಧಿಕಾರಿಗಳನ್ನು ಅಪರಾಧಿಗಳು ಎಂದೂ ಇಲ್ಲಿನ ನ್ಯಾಯಾಲಯ ಘೋಷಿಸಿದೆ. ಗೋವಾ ಯೋಜನೆ ತನ್ನದಾಗಿಸಿಕೊಳ್ಳುವ ಸಲುವಾಗಿ ಕಂಪನಿ ಸಚಿವರಿಗೆ ಲಂಚ ನೀಡಿತ್ತು. ಲಂಚದ ಮೊತ್ತ ಹೆಚ್ಚು ಕಡಿಮೆ ರು.6.19 ಕೋಟಿ. ಆದರೆ, ಲಂಚ ಪಡೆದುಕೊಂಡ ಸಚಿವರು ಹಾಗೂ ಅಧಿಕಾರಿಗಳು ಯಾರು ಎನ್ನುವ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ಆದರೆ, ಇದಕ್ಕಾಗಿ ಕಂಪನಿಗೆ ನ್ಯಾಯಾಲಯ 17.1ದಶಲಕ್ಷ ಡಾಲರ್ ದಂಡ ವಿಧಿಸಿದೆ. ಯೋಜನೆಗಳನ್ನು ದಕ್ಕಿಸಿಕೊಳ್ಳುವ ಸಲುವಾಗಿ ಈ ಕಂಪನಿ ಭಾರತ ಮಾತ್ರವಲ್ಲದೆ ಇಂಡೋನೇಷ್ಯಾ, ವಿಯಟ್ನಾಮ್ ಮತ್ತು ಕುವೈಟ್‍ನ ಸಚಿವರು, ಅಧಿಕಾರಿಗಳಿಗೂ ಲಂಚ ನೀಡಿದೆಯಂತೆ.
ಪ್ರಕರಣದಲ್ಲಿ ಸಂಸ್ಥೆಯ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಫಿಲಿಪ್ಪೀನ್ಸ್ ಮೂಲದ ರಿಚರ್ಡ್ ಹಿರ್ಶ್ (61) ಮತ್ತು ಅಮೆರಿಕ ಮೂಲದ ಜೇಮ್ಸ್ ಮೆಕ್‍ಲಂಗ್ ದೋಷಿಗಳು ಎಂದು ನ್ಯಾಯಾಲಯ ಹೇಳಿದ್ದು, ಶಿಕ್ಷೆ ಪ್ರಮಾಣವನ್ನು ನ.5ರಂದು ಪ್ರಕಟಿಸುವುದಾಗಿ ತಿಳಿಸಿದೆ. ಭಾರತ ಸರ್ಕಾರ ಗೋವಾದಲ್ಲಿ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಜಪಾನ್ ಸಹಯೋಗದಲ್ಲಿ ಐದು ವರ್ಷಗಳ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ.
ಈ ಯೋಜನೆಯಲ್ಲಿ ನಿರ್ಮಾಣದ ಗುತ್ತಿಗೆಯನ್ನು ಅಮೆರಿಕದ ಲೂಯಿಸ್ ಬರ್ಗರ್ ಸಂಸ್ಥೆ ಪಡೆದುಕೊಂಡಿತ್ತು. ಲೂಯಿಸ್ ಬರ್ಗರ್ ಸಂಸ್ಥೆಯ ಹಗರಣದ ಕುರಿತು 11 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿರುವ ಸರ್ಕಾರಿ ಅಭಿಯೋಜಕ ` ಯೋಜನೆಯನ್ನು ತನ್ನದಾಗಿಸಿಕೊಳ್ಳುವ ಸಲುವಾಗಿ ಸಂಸ್ಥೆ ಭಾರತದ ಸಚಿವರಿಗೆ, ಅಧಿಕಾರಿಗಳಿಗೆ ಲಂಚ ನೀಡಿದೆ. ಈ ಕುರಿತು ಸಂಸ್ಥೆ ತನ್ನ ಡೈರಿಯಲ್ಲಿ ಲೆಕ್ಕ ಬರದಿಟ್ಟಿದೆ.
ಸುಮಾರು ರು.6.19ಕೋಟಿಯನ್ನು ಯೋಜನೆಗೆ ಸಂಬಂಧಿಸಿದವರಿಗೆ 2010ರ ಆಗಸ್ಟ್‍ನಲ್ಲಿ ಲಂಚವಾಗಿ ಪಾವತಿಸಲಾಗಿದೆ' ಎಂದು ಆರೋಪಿಸಿದ್ದಾರೆ. ಅಲ್ಲದೆ, ಮಧ್ಯವರ್ತಿಯೊಬ್ಬರ ಸಮ್ಮುಖದಲ್ಲಿ ಸಚಿವರೊಬ್ಬರಿಗೆ ಈ ಹಣ ಸಂದಾಯವಾಗಿದೆ ಎಂದೂ ಕೋರ್ಟ್‍ಗೆ ನೀಡಿದ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಶಿಕ್ಷೆಗೆ ಗುರಿಯಾಗಿರುವ ಲೂಯಿಸ್ ಬರ್ಗ್ ಸಂಸ್ಥೆ, ಗುರ್ಗಾಂವ್, ಮುಂಬೈ, ಚೆನ್ನೈ ಮತ್ತು ಹೈದರಾಬಾದ್‍ನಲ್ಲಿ 1998ರಿಂದಲೂ ಕಚೇರಿ ಹೊಂದಿದೆ.