ದೇಶ

ಲಲಿತ್ ಮೋದಿ ಪ್ರಕರಣ ಗದ್ದಲ: ರಾಜ್ಯಸಭೆ ಕಲಾಪ ಮುಂದೂಡಿಕೆ

ನವದೆಹಲಿ: ಎನ್ ಡಿಎ ಸರ್ಕಾರದ ನಿರೀಕ್ಷೆಯಂತೆಯೇ ಲಲಿತ್ ಮೋದಿ ಪ್ರಕರಣ ಸಂಬಂಧ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ತಮ್ಮ ಆರ್ಭಟವನ್ನು ಮುಂದುವರೆಸಿದ್ದು, ಕಲಾಪವನ್ನು ಮತ್ತೊಮ್ಮೆ 12.30ರವರೆಗೆ ಮುಂದೂಡಲಾಗಿದೆ.

ಲಲಿತ್ ಮೋದಿ ಅಕ್ರಮ ವೀಸಾ ಪ್ರಕರಣ ಇದೀಗ ರಾಜ್ಯಸಭೆಯಲ್ಲಿ ಗದ್ದಲು ಉಂಟು ಮಾಡಿದ್ದು, ಲಲಿತ್ ಮೋದಿಗೆ ಸಹಾಯ ಮಾಡಿದ ಸುಷ್ಮಾ ಸ್ವರಾಜ್ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷ ಪಟ್ಟುಹಿಡಿದಿದೆ. 

ಸುಷ್ಮಾ ಸ್ವರಾಜ್ ರಾಜಿನಾಮೆ ನೀಡಬೇಕೆಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಆಗ್ರಹಿಸಿದ್ದಾರೆ. ಆನಂದ್ ಶರ್ಮಾ ಅವರ ಆಗ್ರಹಕ್ಕೆ ಉತ್ತರಿಸಿದ ಅರುಣ್ ಜೇಟ್ಲಿ ಲಲಿತ್ ಮೋದಿ ಪ್ರಕರಣ ಸಂಬಂಧ ಚರ್ಚೆ ನಡೆಸಲು ಸರ್ಕಾರ ಸಿದ್ಧತೆಗಳನ್ನು ನಡೆಸುತ್ತಿದ್ದು, ಶೀಘ್ರದಲ್ಲೇ ಈ ಕುರಿತಂತೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿರುವ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, ಸರ್ಕಾರ ಎಲ್ಲಾ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಲಿದ್ದು, ಚರ್ಚೆ ಮಾಡದೆ ಯಾವುದನ್ನು ಮುಚ್ಚಿಡುವುದಿಲ್ಲ. ಈ ಕುರಿತಂತೆ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಅಧಿವೇಶನದ ವೇಳೆ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ರಾಮಮಂದಿರ ನಿರ್ಮಾಣ ಸಂಬಂಧ ಅಧಿಕಾರಿಗಳು ಚರ್ಚೆನಡೆಸಲು ಅವಕಾಶ ನೀಡಬೇಕೆಂದು ಕೋರಿದ್ದು, ಈ ಕುರಿತಂತೆ ವಿಶೇಷ ಅಧಿವೇಶನ ಮಾಡುವಂತೆ ಆಗ್ರಹಿಸಿದ್ದಾರೆ.

ಸಂಸತ್ ಕಲಾಪಗಳು ಸುಸೂತ್ರವಾಗಿ ಸಾಗಲಿ ಎಂಬ ಉದ್ದೇಶದಿಂದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದ ಸರ್ವಪಕ್ಷ ಸಭೆ ವಿಫಲವಾಗಿತ್ತು. ಲಲಿತ್ ಮೋದಿ ಹಾಗೂ ವ್ಯಾಪಂ ಹಗರಣಕ್ಕೆ ಸಂಬಂಧಿಸಿ ಬಿಜೆಪಿ ಸಚಿವರು ರಾಜಿನಾಮೆ ನೀಡಲೇಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದು ಕುಳಿತಿತ್ತು. ಎಲ್ಲ ವಿಚಾರಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಮೋದಿ ಅವರು ಭರವಸೆ ನೀಡಿದರೂ, ಪ್ರತಿಪಕ್ಷಗಳು ಮಾತ್ರ ಅದನ್ನು ಒಪ್ಪಲು ಸಿದ್ಧರಿರಲಿಲ್ಲ.

ಈ ಎಲ್ಲ ಬೆಳವಣಿಗೆಗಳು ಮುಂಗಾರು ಅಧಿವೇಶನ ಸುಗಮವಾಗಿ ಸಾಗುವ ಸಾಧ್ಯತೆಯನ್ನೇ ತಳ್ಳಿಹಾಕಿದವು. ವಿಶೇಷವೆಂದರೆ ಎನ್ ಡಿಎ ಅಂಗಪಕ್ಷ ಶಿವಸೇನೆ ಕೂಡ, ಬಿಜೆಪಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತಲ್ಲದೇ, ಕಷ್ಟ ಬಂದಾಗಷ್ಟೇ ನಾವು ನೆನಪಾಗುತ್ತೇವೆ ಎಂದು ಹೇಳಿತ್ತು.

SCROLL FOR NEXT