ದೇಶ

ರೈತರ ಭೂಮಿ ಕಸಿಯಲು ಅಷ್ಟು ಸುಲಭವಾಗಿ ಬಿಡುವುದಿಲ್ಲ: ರಾಹುಲ್ ಗಾಂಧಿ

ಅನಂತಪುರ: ಎನ್ ಡಿಎ ಸರ್ಕಾರದ ವಿವಾದಿತ ಭೂಸ್ವಾಧೀನ ಮಸೂದೆ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ರೈತರ ಭೂಮಿ ಕಸಿಯುವ ನರೇಂದ್ರ ಮೋದಿ ಅವರ ಪ್ರಯತ್ನವನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.

ಭೂ ಸ್ವಾಧೀನ ಮಸೂದೆ ವಿರೋಧಿಸಿ ಇಂದು ಅನಂತಪುರದ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ರೈತರ ಪರವಾಗಿರುವ ನಮ್ಮ ಶಕ್ತಿಯನ್ನು ಕನಿಷ್ಟ ಶೇ.10 ರಷ್ಟನ್ನು ನಾವು ತೋರಿಸಿಲ್ಲ. ಆಗಲೇ ರೈತರ ಭೂಮಿ ಕಸಿಯುವ ಪ್ರಯತ್ನ ಅಷ್ಟು ಸುಲಭವನ್ನ ಎಂಬ ಸತ್ಯವನ್ನು ನರೇಂದ್ರ ಮೋದಿ ಅವರು ಅರ್ಥ ಮಾಡಿಕೊಂಡಿದ್ದಾರೆ. ರೈತರ ಪರವಾಗಿರುವ ನಮ್ಮ ನಿಲುವು ಎಂದಿಗೂ ಬದಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ರೈತರಿಬ್ಬರೂ ಸೇರಿ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದು, ಭೂ ಮಸೂದೆ ಕಾಯ್ದೆ ತಿದ್ದುಪಡಿ ಜಾರಿಯಾಗುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿಮಂತ್ರಿಯೇ ಆಗಲಿ ಬೇರಾವುದೇ ಶಕ್ತಿಶಾಲಿ ವ್ಯಕ್ತಿಯಾದರೂ ಯಾರಿಗೂ ಕಾಂಗ್ರೆಸ್ ಪಕ್ಷ ಹೆದರುವುದಿಲ್ಲ. ರೈತರ ಪರವಾಗಿರುವ ನಮ್ಮ ಹೋರಾಟವನ್ನು ಕಂಡು ಸರ್ಕಾರ ಇದೀಗ ತನ್ನ ಆಲೋಚನೆಯನ್ನು ಬದಲಾಯಿಸುತ್ತಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ನೀಡುವುದು ಪ್ರಧಾನಮಂತ್ರಿ ಅವರಿಗೆ ಇಷ್ಟವಿಲ್ಲ. ಬದಲಾಗಿ ಇಲ್ಲಿರುವ ರೈತರ ಭೂಮಿ ಕಸಿದುಕೊಳ್ಳುವ ಆಲೋಚನೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಕಿಡಿಕಾರಿರುವ ಅವರು, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಹಾಗೂ ಪೊಲವರಂ ಯೋಜನೆ ಕುರಿತಂತೆ ಇಲ್ಲಿನ ಸರ್ಕಾರ ಹಾಗೂ ವಿರೋಧ ಪಕ್ಷಗಳು ಯಾಕೆ ಹೋರಾಟ ಮಾಡುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಈ ಕುರಿತಂತ ನರೇಂದ್ರ ಮೋದಿ ಅವರ ಉದ್ದೇಶವೇನಿರಬಹುದು ಎಂಬುದು ನನಗೆ ಸಂಪೂರ್ಣವಾಗಿ ಅರ್ಥವಾಗಿದೆ ಎಂದು ಹೇಳಿದ್ದಾರೆ.

SCROLL FOR NEXT