ದೇಶ

ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ನಿಧನ

Srinivas Rao BV

ಶಿಲ್ಲಾಂಗ್: ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಂ ವಿಧಿವಶರಾಗಿದ್ದಾರೆ.

ಜುಲೈ 21 ರ ಸಂಜೆ  ಶಿಲ್ಲಾಂಗ್ ನ ಐಐಎಂ ನಲ್ಲಿ ಉಪನ್ಯಾಸ ನೀಡುತ್ತಿರಬೇಕಾದರೆ ಏಕಾಏಕಿ ಕುಸಿದುಬಿದ್ದಿದ್ದ ಕಲಾಂ ಅವರ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಕಂಡುಬಂದಿತ್ತು. ಕೂಡಲೇ ಅವರನ್ನು ಶಿಲ್ಲಾಂಗ್ ನ ಬೆಥೇನಿ ಆಸ್ಪತ್ರೆಯ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದಾರೆ.

84 ವರ್ಷದ ಅಬ್ದುಲ್ ಕಲಾಂ ಅವರು ವಿಜ್ಞಾನಿಯಾಗಿ ಮಾತ್ರವಲ್ಲದೇ ಭಾರತೀಯರ ನೆಚ್ಚಿನ ರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಬ್ದುಲ್ ಕಲಾಂ ಅವರು ಅನಾರೋಗ್ಯಕ್ಕೊಳಗಾಗಿದ್ದ ಹಿನ್ನೆಲೆಯಲ್ಲಿ ಮೇಘಾಲಯ ಸರ್ಕಾರ ವಿಶೇಷ ವೈದ್ಯರ ತಂಡ ರಚಿಸಿ ಕಲಾಂ ಆರೋಗ್ಯದ ಮೇಲ್ವಿಚಾರಣೆ ನಡೆಸಬೇಕೆಂದು ಸೂಚಿಸಿತ್ತು.

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಉದ್ಯೋಗಿಯಾಗಿ ವೃತ್ತಿಜೀವನ ಪ್ರಾರಂಭಿಸಿದ್ದ ಅಬ್ದುಲ್ ಕಲಾಂರಿಗೆ ರಾಷ್ಟ್ರಪತಿ ಹುದ್ದೆ ಅರಸಿ ಬಂದಿತ್ತು. 2002 ರಿಂದ 2007ರ ಅವಧಿಯಲ್ಲಿ ಅಬ್ದುಲ್ ಕಲಾಂ ಭಾರತದ 11 ನೇ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ್ದರು. ರಾಜಸ್ಥಾನದ ಪೋಕ್ರಾನ್ ನಲ್ಲಿ ಅಣು ಪರೀಕ್ಷೆಯ ನೇತೃತ್ವ ವಹಿಸಿದ್ದ ಅಬ್ದುಲ್ ಕಲಾಂ ಭಾರತ ಅಣ್ವಸ್ತ್ರ ರಾಷ್ಟ್ರವಾಗುವುದರಲ್ಲಿ  ಮಹತ್ವದ ಪಾತ್ರ ವಹಿಸಿದ್ದರು. "ಮಿಸೈಲ್ ಮ್ಯಾನ್" ಎಂದೇ ವಿಶ್ವಾದ್ಯಂತ ಖ್ಯಾತಿ ಗಳಿಸಿದ್ದ ಕಲಾಂ ಅವರಿಗೆ 1997  ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಭಾರತದ ನೆಚ್ಚಿನ ರಾಷ್ಟ್ರಪತಿಯಾಗಿದ್ದ ಕಲಾಂ ಅವರ ಅಗಲಿಕೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದು ದೇಶಾದ್ಯಂತ 7 ದಿನಗಳ ವರೆಗೆ ಶೋಕಾಚಣೆ ನಡೆಯಲಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಗೋಯೆಲ್ ತಿಳಿಸಿದ್ದಾರೆ. 

SCROLL FOR NEXT