ನವದೆಹಲಿ: ಸಂಸತ್‍ನ ಮುಂಗಾರು ಅಧಿವೇಶನದ ಎರಡನೇ ವಾರ ಸೋಮವಾರದಿಂದ ಆರಂಭವಾಗಲಿದೆ. ಕಳೆದ ವಾರವಂತೂ, ವ್ಯಾಪಂ, ಲಲಿತ್ ಮೋದಿಗೆ ನೆರವು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಲೋಕಸಭೆ, ರಾಜ್ಯಸಭೆಯಲ್ಲಿ ಕಲಾಪ ನಡೆಸಲು ಸಾಧ್ಯವಾಗಲೇ ಇಲ್ಲ.
ಶುಕ್ರವಾರ ಎರಡೂ ಸದನಗಳನ್ನು ಗದ್ದಲದ ಹಿನ್ನೆಲೆಯಲ್ಲಿ ಅದನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. ಇದೇ ವೇಳೆ ಕಳೆದ ವಾರ ರೈತರ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ರಾಜ್ಯಸಭೆಯಲ್ಲಿ ನೀಡಿರುವ ಉತ್ತರ ವಿವಾದಕ್ಕೆ ಕಾರಣವಾಗಿದ್ದರಿಂದ ಜನತಾ ಪರಿವಾರ ಮೋದಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಸಿದಟಛಿವಾಗಿದೆ. ಸಚಿವರ ವಿರುದ್ಧ ಸೋಮವಾರ ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಜೆಡಿಯು ಮುಂದಾಗಿದೆ. ಜೆಡಿಎಸ್ ವರಿಷ್ಠ ಎಚ್ .ಡಿ.ದೇವೇಗೌಡ ಜಂತರ್‍ಮಂತರ್‍ನಲ್ಲಿ ರೈತರ ಬೃಹತ್ ರ್ಯಾಲಿಯನ್ನು ಆಯೋಜಿಸಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಸಚಿವರ ಹೇಳಿಕೆ ಮತ್ತು ಅದನ್ನು ಬೆಂಬಲಿಸಿ ಮಾತನಾಡಿದ ಸಚಿವ ಅರುಣ್ ಜೇಟ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.
ಅವಕಾಶವಾದಿತನ: ಮತ್ತೊಂದು ಬೆಳವಣಿಗೆಯಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಚೌಧರಿ ಬೀರೇಂದ್ರ ಸಿಂಗ್ ಭೂವಿಧೇಯಕ ವಿಚಾರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಮಾತ್ರ ಯಾವುದೇ 2013ರ ಕಾನೂನಿನಲ್ಲಿ ತಿದ್ದುಪಡಿಯಿಲ್ಲದೆ ಮಸೂದೆ ಮಂಡನೆ ಆಗಬೇಕೆಂದು ಒತ್ತಾಯಿಸುತ್ತಿದೆ.
ಇದರಿಂದಾಗಿ ಸಂಸತ್‍ನ ಜಂಟಿ ಸಮಿತಿಯಿಂದ ಒಮ್ಮತದ ನಿರ್ಧಾರ ಹೊರಬರಲು ತೊಡಕಾಗಿದೆ ಎಂದು ಆರೋಪಿಸಿದೆ. ರೈತರ ಹಿತದೃಷ್ಟಿಯಿಂದ ಯಾವುದೇ ಸಲಹೆ ಸ್ವೀಕರಿಸಲು ಸಿದ್ಧ ಎಂದಿರುವ ಗ್ರಾಮೀಣ ಅಭಿವೃದ್ಧಿ ಸಚಿವ ಚೌಧರಿ ಬಿರೇಂದ್ರ್ ಸಿಂಗ್, ಯುಪಿಎ ಸರ್ಕಾರ ಅಂದು ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ಮಾಡಿದ ಸಿದ್ಧಪಡಿಸಿದ ಕರಡು ಮಸೂದೆಯನ್ನು ತಿದ್ದುಪಡಿಗಳಿಲ್ಲದೆ ಮಂಡಿಸಲು ಅಸಾಧ್ಯ ಎಂದಿದ್ದಾರೆ. ಹಾಲಿ ಅಧಿವೇಶನದಲ್ಲೇ ಅದಕ್ಕೆ ಒಮ್ಮತ ಸಿಕ್ಕಿ ಅನುಮೋದನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.