ದೇಶ

ನೇಪಾಳದ ಗಧಿಮಾಯಿ ಉತ್ಸವದಲ್ಲಿನ್ನು ರಕ್ತ ಹರಿಯಲ್ಲ

Shilpa D

ನವದೆಹಲಿ: ಲಕ್ಷಾಂತರ ಪ್ರಾಣಿಗಳ ಮಾರಣಹೋಮಕ್ಕೆ ಸಾಕ್ಷಿಯಾಗುತ್ತಿದ್ದ ನೇಪಾಳದ ಗಧಿಮಾಯಿ ಉತ್ಸವದಲ್ಲಿ ಇನ್ನು ರಕ್ತದೋಕುಳಿ ಹರಿಯಲ್ಲ. ಹೌದು. ಗಧಿಮಾಯಿ ಉತ್ಸವದಲ್ಲಿ ಪ್ರಾಣಿ ವಧೆಗೆ ನಿಷೇಧ ಹೇರಿ ಮಂಗಳವಾರ ನೇಪಾಳದ ದೇವಾಲಯ ಮಂಡಳಿ ಐತಿಹಾಸಿಕ ಘೋಷಣೆ ಮಾಡಿದೆ. ಇದನ್ನು ಜಾಗತಿಕ ಪ್ರಾಣಿ ದಯಾ ಹೋರಾಟಗಾರರಿಗೆ ಸಿಕ್ಕ ಅತಿದೊಡ್ಡ ಗೆಲವು ಎಂದೇ ಬಣ್ಣಿಸಲಾಗಿದೆ.

ಕಳೆದ 300 ವರ್ಷಗಳಿಂದಲೂ ಪಾಲಿಸಿಕೊಂಡು ಬರಲಾಗುತ್ತಿದ್ದ ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಾಣಿ ವಧೆಯೇ ಪ್ರಮುಖ ಪ್ರಕ್ರಿಯೆಯಾಗಿತ್ತು.  ಪ್ರತಿ 5 ವರ್ಷಗಳಿಗೊಮ್ಮೆ ಈ ಉತ್ಸವ ನಡೆಯುತ್ತಿತ್ತು. ಈಗ ಪ್ರಾಣಿಗಳ ವಧೆಗೆ ನಿಷೇಧ ಹೇರಿರುವ ದೇವಾಲಯ ಮಂಡಳಿ, ``2019ರ ಗಧಿಮಾಯಿ ಉತ್ಸವವನ್ನುರಕ್ತದೋಕುಳಿ ಮುಕ್ತವಾಗಿ ಸೋಣ. ಈ ಉತ್ಸವವನ್ನು ನಾವೆಲ್ಲವೂ ಜೀವನದ ಅತಿ ಸ್ಮರಣೀಯ ಉತ್ಸವವನ್ನಾಗಿ ಆಚರಿಸೋಣ'' ಎಂದಿದೆ. ನೇಪಾಳದ ಅನಿಮಲ್ ವೆಲ್ಫೇರ್ ನೆಟ್‍ವರ್ಕ್ ಮತ್ತು ಹ್ಯೂಮೇನ್ ಸೊಸೈಟಿ ಇಂಟರ್ ನ್ಯಾಷನಲ್ ಇಂಡಿಯಾ ಕೈಗೊಂಡ ಭಾರಿ ಅಭಿಯಾನ ಮತ್ತು ಸಂಧಾನ ಪ್ರಕ್ರಿಯೆ ಫಲವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದೂ ಮಂಡಳಿ ತಿಳಿಸಿದೆ.

ಕೆಲ ತಿಂಗಳ ಹಿಂದೆ ನೇಪಾಳದಲ್ಲಿ ಭಾರಿ ಭೂಕಂಪ ಸಂಭವಿಸಿ, ಅಪಾರ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ ಉಂಟಾ ದಾಗ ಈ ಪ್ರಾಕೃತಿಕ ವಿಕೋಪಕ್ಕೆ ಪ್ರಾಣಿಗಳ ವಧೆಯೇ ಕಾರಣ ಎಂಬ ಸುದ್ದಿಗಳು ಜಾಲತಾಣಗಳಲ್ಲಿ ಹರಿದಾಡಿದ್ದವು. ಪ್ರಾಣಿ ವಧೆಯ ಶಾಪ ನೇಪಾಳಕ್ಕೆ ತಟ್ಟಿದೆ ಎಂಬ ಮಾತುಗಳೂ ಕೇಳಿಬಂದಿದ್ದವು.

SCROLL FOR NEXT