ಪಾಟ್ನಾ: ಮದ್ಯಸೇವನೆ, ಮಾರಾಟ ಮಾಡುವವರು ಕಂಡರೆ ಅವರಿಗೆ ಪೊರಕೆಯಲ್ಲಿ ಹೊಡೆಯಿರಿ ಎಂದು ಬಿಹಾರದಲ್ಲಿ ಮಹಿಳಾ ಪಂಚಾಯತ್ ಆದೇಶ ನೀಡಿದೆ.
ಬಿಹಾರದ ಶೇಖ್ ಪುರ ಜಿಲ್ಲೆಯ ರಂಜಾನ್ ಪುರ ಗ್ರಾಮದಲ್ಲಿ ಮದ್ಯಸೇವನೆ ನಿಷೇಧ ಮಾಡಲಾಗಿದೆ. ಮದ್ಯ ಮಾರಾಟ ಮಾಡುವವರಿಗೆ ಹಾಗೂ ಸೇವನೆ ಮಾಡುವವರಿಗೆ ದಂಡ ವಿಧಿಸಬೇಕೆಂದು ಆದೇಶ ನೀಡಿದೆ. ಅಲ್ಲದೆ ಕುಡುಕರಿಗೆ ಪೊರಕೆ ಹೊಡೆಯಿರಿ ಎಂದು ಮಹಿಳೆಯರಿಗೆ ಪಂಚಾಯತ್ ಸೂಚನೆ ನೀಡಿದೆ.
ಮದ್ಯ ಮಾರಾಟ ಗ್ರಾಮದ ಮಹಿಳೆಯರಿಗೆ ಶಾಪವಾಗಿ ಪರಿಣಮಿಸಿದ್ದು ಅದರ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ ಎಂದು ಪಂಚಾಯತ್ ನ ಸದಸ್ಯೆ ಶಮಾ ದೇವಿ ಹೇಳಿದ್ದಾರೆ. ಪಂಚಾಯತ್ ನ ನಿರ್ಧಾರವನ್ನು ಜನರಿಗೆ ತಿಳಿಸಲು ಗ್ರಾಮದಲ್ಲಿರುವ ಪ್ರಮುಖ ರಸ್ತೆಗಳಲ್ಲಿ ಪೋಸ್ಟರ್ ಹಾಕಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಪಂಚಾಯತ್ ನ ಆದೇಶದ ಹೊರತಾಗಿಯೂ ಮದ್ಯ ಸೇವನೆ ಮಾಡಿದರೆ 2 ,500 ಹಾಗೂ ಮಾರಾಟ ಮಾಡುವುದು ಕಂಡುಬಂದರೆ ರೂ. 19 ,000 ರೂ ದಂಡ ವಿಧಿಸಲು ಪಂಚಾಯತ್ ನಿರ್ಧಾರ ಮಾಡಿದೆ. ಮದ್ಯ ಮಾರಾಟದ ವಿರುದ್ಧ ಮಹಿಳೆಯರು ಆಕ್ರೋಶಗೊಂಡಿರುವುದನ್ನು ಗಮನಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮುಂಬರುವ ವಿಧಾನಸಭೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಭರವಸೆ ನೀಡಿದ್ದಾರೆ.