ಪುಣೆ: ಆರ್ ಎಸ್ಎಸ್ ವಿದ್ಯಾರ್ಥಿಗಳಿಗೆ ಹೆದರುತ್ತಿದೆ. ಹೇಡಿತನವೇ ಅದರ ನಿಜವಾದ ಸ್ವರೂಪವಾಗಿದ್ದು, ಎಫ್ ಟಿಐಐ ವಿವಾದ ವಿಷಯವಿಡಿದುಕೊಂಡು ಕಳಪೆ ಮಟ್ಟದ ಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ.
ಈ ಕುರಿತಂತೆ ಇಂದು ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಗೆ ಭೇಟಿ ನೀಡಿ ಮಾತನಾಡಿರುವ ಅವರು, ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಉನ್ನತ ಅಧಿಕಾರಿಗಳ ಮಧ್ಯೆ ಕೂರಿಸಲಾಗುತ್ತಿದೆ. ಆರ್ ಎಸ್ಎಸ್ ಸಂಘಟನೆಯು ತನ್ನ ಶಕ್ತಿ ಬಳಸಿಕೊಂಡು ಕಳಪೆ ಮಟ್ಟದ ಪ್ರಚಾರ ಮಾಡುತ್ತಿದೆ ಎಂದು ಹೇಳಿದ್ದಾರೆ.
ಇಷ್ಟಕ್ಕೂ ಎಫ್ ಟಿಐಐ ಕುರಿತ ವಿದ್ಯಾರ್ಥಿಗಳ ಪ್ರತಿಭಟನೆಗೆ ಸರ್ಕಾರ ಏಕೆ ವಿರೋಧಿಸುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಎಫ್ ಟಿಐಐ ಅಧ್ಯಕ್ಷ ನೇಮಕ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನೇ ಆರ್ ಎಸ್ಎಸ್ ಹಿಂದೂ ವಿರೋಧಿಗಳು ಎಂದು ಕರೆಯುತ್ತಿದೆ. ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆರ್ಎಸ್ಎಸ್ ಹೆದರುತ್ತಿದ್ದು, ದೇಶದೆಲ್ಲೆಡೆ ಆರ್ಎಸ್ಎಸ್ ಗುಂಡಾಗಳು ಹಾಗೂ ರೌಡಿಗಳಂತೆ ವರ್ತಿಸುತ್ತಿದೆ. ಎಫ್ ಟಿಐಐ ಅಧ್ಯಕ್ಷ ನೇಮಕಾತಿ ನಿರ್ಧಾರವನ್ನು ನರೇಂದ್ರ ಮೋದಿ ಅವರೇ ಕೈಗೊಂಡಿದ್ದರೆ, ಈ ನಿರ್ಧಾರದಿಂದ ಬಿಜೆಪಿ ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (ಎಫ್ ಟಿಐಐ) ಅಧ್ಯಕ್ಷರಾಗಿ ಗಜೇಂದ್ರ ಚೌಹಾಣ್ ಅವರನ್ನು ನೇಮಕ ಮಾಡಿರುವುದನ್ನು ವಿರೋಧಿಸಿ ಚಲನಚಿತ್ರ ಕಲಾವಿದರು ಹಾಗೂ ಎಫ್ ಟಿಐಐ ನ ವಿದ್ಯಾರ್ಥಿಗಳು ಪ್ರತಿಭಟನೆಗಳಿದಿದ್ದವು. ದಿನಕಳೆದಂತೆ ಈ ಕುರಿತಂತೆ ಪ್ರತಿಭಟನೆಗಳು ಕಾವೇರುತ್ತಿದ್ದು, ಎಲ್ಲೆಡೆ ಗಜೇಂದ್ರ ಚೌಹಾಣ್ ನೇಮಕ ವಿರುದ್ಧ ಕೂಗು ಕೇಳಿಬರುತ್ತಿದೆ.