ಸಿಡ್ನಿ: ಮಾರ್ಚ್‍ನಲ್ಲಿ ಸಿಡ್ನಿಯಲ್ಲಿ ಕೊಲೆಗೀಡಾದ ಬಂಟ್ವಾಳ ನಿವಾಸಿ ಪ್ರಭಾ ಅರುಣ್‍ಕುಮಾರ್(41) ಸಾವಿಗೆ ಸಂಬಂಧಿಸಿದ ತನಿಖೆ ಮಂಗಳೂರಿಗೂ ವ್ಯಾಪಿಸುವ ಸಾಧ್ಯತೆಯಿದೆ.
ಪ್ರಭಾ ಹತ್ಯೆ ಪ್ರಕರಣ ಕುರಿತು ಆಸ್ಟ್ರೇಲಿಯಾ ಪೊಲೀಸರು ಶುಕ್ರವಾರ ಹೊಸ ಸಿಸಿಟಿವಿ ದೃಶ್ಯಾವಳಿ ಬಿಡುಗಡೆ ಮಾಡಿದ್ದು, ಕೊಲೆಗಾರನನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಭಾ ಸಾವಿಗೀಡಾದ ಪರಮಟ್ಟಾ ಗಾಲ್ಫ್ ಕೋರ್ಸ್‍ನಲ್ಲಿ ಒಬ್ಬ ವ್ಯಕ್ತಿ ತಿರುಗಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈತನಿಗಾಗಿ ಹುಡುಕಾಟ ಶುರುವಾಗಿದೆ. ಪ್ರಕರಣ ನಡೆದಾಗಿನಿಂದ ಈವರೆಗೂ ಎಷ್ಟೇ ತನಿಖೆ ನಡೆಸಿದರೂ ಈತ ಯಾರು ಎನ್ನುವುದನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರಕರಣದ ತನಿಖಾ ವ್ಯಾಪ್ತಿಯನ್ನು ಭಾರತಕ್ಕೂ ವಿಸ್ತರಿಸಲು ಆಸ್ಟ್ರೇಲಿಯನ್ ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಬಿಡುಗಡೆ ಮಾಡಿರುವ ನೂತನ ಸಿಸಿಟಿವಿ ದೃಶ್ಯಾವಳಿಯಲ್ಲಿ ಶಂಕಿತ ಕೊಲೆಗಾರ ಜುಬಿಲಿ ಲೇನ್ ಸಮೀಪದ ಪ್ಯಾರಾಮಟ್ಟಾ ಗಲ್ಫ್ ಕೋರ್ಸ್ ನತ್ತ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಾ ಬರುತ್ತಿರುವ ಕಂಡುಬಂದಿದೆ. ಇದೇ ವೇಳೆ, ಇದೊಂದು ಹೈ ಪ್ರೊಫೈಲ್ ಪ್ರಕರಣವಾಗಿರುವ ಕಾರಣ ಸಿಡ್ನಿಯ ಸ್ಟೇಟ್ ಕ್ರೈಂ ಕಮಾಂಡ್ಸ್ ಹೋಮಿಸೈಟ್ ಸ್ಕ್ವಾಡ್‍ನ ಪೊಲೀಸರು ಸದ್ಯದಲ್ಲೇ ಮಂಗಳೂರಿಗೂ ಆಗಮಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಿದ್ದಾರೆ. ಟೆಕಿ ಪ್ರಭಾರನ್ನು ಮಾ.7ರಂದು ಸಿಡ್ನಿಯ ಪಾರ್ಕ್‍ವೊಂದರಲ್ಲಿ ಚೂರಿ ಇರಿದು ಹತ್ಯೆ ಮಾಡಲಾಗಿತ್ತು.
ಸಿಸಿಟಿವಿ ದೃಶ್ಯಾವಳಿಯಲ್ಲಿರುವ ಶಂಕಿತ ವ್ಯಕ್ತಿಯನ್ನು ಇಲ್ಲಿಯವರೆಗೂ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹೀಗಾಗಿ ತನಿಖಾ ವ್ಯಾಪ್ತಿಯನ್ನು ವಿಸ್ತರಿಸುವ ಕುರಿತು ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ರಿಚಿ ಸಿಮ್ ಹೇಳಿದ್ದಾರೆ.