ದೇಶ

ರಾಜ್ಯದಲ್ಲಿ 2 ಮಿನಿಟ್ ಮ್ಯಾಗಿಗೆ 3 ದಿನ ತಡೆ

Mainashree

ಬೆಂಗಳೂರು: ಎರಡು ನಿಮಿಷದ ಮ್ಯಾಗಿಗಿಗೆ ರಾಜ್ಯದಲ್ಲಿ ಮೂರು ದಿನ ನಿಷೇಧ ಹೇರಲಾಗಿದೆ. ದೇಶಾದ್ಯಂತ ಮ್ಯಾಗಿಗಿ ನ್ಯೂಡಲ್ಸ್‍ನ ಗುಣ ಮಟ್ಟದ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿರುವ ಬೆನ್ನಲ್ಲೇ ರಾಜ್ಯದಲ್ಲೂ ತಾತ್ಕಾಲಿಕ ನಿಷೇಧ ಹೇರಲು ಸರ್ಕಾರ ನಿರ್ಧರಿಸಿದೆ.

ಮ್ಯಾಗಿಯಲ್ಲಿ ಹಾನಿಕಾರಕ ಸೀಸದ ಅಂಶ ಇದೆ ಎನ್ನುವ ಬಗ್ಗೆ ಮಾಹಿತಿ ಬಂದಿರುವುದರಿಂದ ಸಾರ್ವಜನಿಕರು ನೆಸ್ಲೆ ಸಂಸ್ಥೆಯ ಮ್ಯಾಗಿ ನ್ಯೂಡಲ್ಸ್ ತಿನಿಸುಗಳನ್ನು ಬಳಸಬಾರದು. ಹಾಗೆಯೇ
ಮಾರಾಟಗಾರರು ಕೂಡ ಮ್ಯಾಗಿ ಮಾರಾಟವನ್ನು ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಅದನ್ನು ಉತ್ತೇಜಿಸಲು ಮುಂದಾಗಬಾರದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಮನವಿಯಲ್ಲಿ ತಿಳಿಸಿದ್ದಾರೆ.

ಮ್ಯಾಗಿ ನ್ಯೂಡಲ್ಸ್ ರಾಜ್ಯಕ್ಕೆ ಎಲ್ಲಿಂದ ಬರುತ್ತದೆ ಎಂದು ತಿಳಿದು ಅವುಗಳ ಮಾದರಿಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ. ಅವುಗಳನ್ನು ರಾಜ್ಯದ ಪ್ರಯೋಗಾಲಯ ಮಾತ್ರವಲ್ಲದೆ ರಾಷ್ಟ್ರೀಯ ಪ್ರಯೋಗಾಲಯಗಳಲ್ಲೂ ಪರೀಕ್ಷಿಸುವಂತೆ ಆದೇಶಿಸಲಾಗಿದೆ. ಇದರೊಂದಿಗೆ ಮೈಸೂರಿನ ಸಿಎಫ್ ಟಿಆರ್‍ಐ ಮತ್ತು ಎರಡು ರಾಷ್ಟ್ರೀಯ ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲ ಯಗಳಿಂದಲೂ ಪರೀಕ್ಷೆ ನಡೆಸಲಾಗುತ್ತದೆ.

ಈ ಎಲ್ಲಾ ವರದಿಗಳು ಮೂರು ದಿನಗಳಲ್ಲಿ ಲಭ್ಯವಾಗಲಿದ್ದು, ವರದಿಯನ್ನು ಪರಿಶೀಲಿಸಿ ಸರ್ಕಾರ ಅದನ್ನು ನಿಷೇಧಿಸಬೇಕೇ, ಬೇಡವೇ ಎಂದು ತೀರ್ಮಾನಿಸುತ್ತದೆ. ಕೇರಳದಲ್ಲಿ ಮ್ಯಾಗಿ ನಿಷೇಧಿಸಲಾಗಿದೆ ಎಂದು ರಾಜ್ಯದಲ್ಲೂ ಏಕಾಏಕಿ ನಿಷೇಧಿಸಿದರೆ ಮುಂದೆ ನೆಸ್ಲೆ ಸಂಸ್ಥೆಯವರು ಸರ್ಕಾರದ ನಿರ್ಧಾರವನ್ನು ಕೋರ್ಟ್‍ನಲ್ಲಿ ಪ್ರಶ್ನಿಸಬಹುದು. ಆದ್ದರಿಂದ ವೈಜ್ಞಾನಿಕ ರೀತಿ ಯಲ್ಲಿ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಹಾನಿಕಾರಕ ಅಂಶ ಇದ್ದರೆ ಮಾಹಿತಿ ಕೊಡಿ
ಮ್ಯಾಗಿಯಲ್ಲಿ ಹಾನಿಕಾರಕ ಅಂಶ ಇದೆ ಎಂಬುದರ ಕುರಿತು ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಮೂರು ದಿನಗಳಲ್ಲಿ ಆರೋಗ್ಯ ಇಲಾಖೆ ಸವಿವರ ವರದಿ ಸಲ್ಲಿಸಲಿದೆ. ಈ ವರದಿ ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಒಂದು ವೇಳೆ ಹಾನಿಕಾರಕ ಅಂಶ ಪತ್ತೆಯಾದರೆ ನೆಸ್ಲೆ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸ ಲಾಗುತ್ತದೆ.

ಮ್ಯಾಗಿಯಂಥ ಯಾವುದೇ ಆಹಾರ ಪದಾರ್ಥಗಳನ್ನು ಖರೀದಿಸುವ ಮುನ್ನ ಅದರಲ್ಲಿರುವ ದೃಢೀಕೃತ ಅಂಶಗಳ ಬಗ್ಗೆ ಸಾರ್ವಜನಿಕರು ಗಮನಹರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಹಾಗೆಯೇ ತಿಂಡಿ, ತಿನಿಸುಗಳ ಬಗ್ಗೆ ಅನುಮಾನ ಬಂದರೆ, ಹಾನಿಕಾರ ಅಂಶ ಇರುವ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ನೀಡಬೇಕು ಎಂದು ಸಾರ್ವಜನಿಕ ಆರೋಗ್ಯ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT