ನವದೆಹಲಿ: ಕೇಂದ್ರ ಸರ್ಕಾರ ಮುಖ್ಯ ಜಾಗೃತ ಆಯುಕ್ತ(ಸಿವಿಸಿ) ಹಾಗೂ ಮುಖ್ಯ ಮಾಹಿತಿ ಆಯುಕ್ತ(ಸಿಐಸಿ)ರ ಹೆಸರುಗಳನ್ನು ಅಂತಿಮಗೊಳಿಸುವ ಸಿದ್ಧತೆಯಲ್ಲಿರುವಾಗಲೇ ಹೊಸ ವಿವಾದವೊಂದು ಹುಟ್ಟಿದೆ.
ಸಿವಿಸಿ ಹುದ್ದೆಗೆ ಪ್ರಮುಖವಾಗಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಮಾಜಿ ಮುಖ್ಯಸ್ಥ ಕೆ.ವಿ. ಚೌಧರಿ ಅವರ ಹೆಸರು ಕೇಳಿಬರುತ್ತಿದ್ದು, ಅವರನ್ನು ಸಿವಿಸಿಯನ್ನಾಗಿ ನೇಮಕ ಮಾಡುವುದಕ್ಕೆ ಸಾಮಾಜಿಕ ಹೋರಾಟಗಾರ, ವಕೀಲ ಪ್ರಶಾಂತ್ ಭೂಷಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
2ಜಿ ಸ್ಪೆಕ್ಟ್ರಂ ಹಾಗೂ ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಗಣ್ಯರು ಹಾಗೂ ಅಧಿಕಾರಿಗಳು ಸಿಬಿಐನ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ಅವರ ನಿವಾಸಕ್ಕೆ ಭೇಟಿ ನೀಡಿದ್ದನ್ನು ಸ್ವತಃ ಭೂಷಣ್ ಅವರೇ ಬಹಿರಂಗಪಡಿಸಿದ್ದರು. ಸಿನ್ಹಾ ಮನೆಗೆ ಭೇಟಿ ನೀಡಿದ್ದವರ ಪೈಕಿ ಕೆ.ವಿ. ಚೌಧರಿ ಅವರೂ ಸೇರಿದ್ದಾರೆ. ಆ ಪಟ್ಟಿಯಲ್ಲಿ ಚೌಧರಿ ಅವರ ಹೆಸರು 4 ಬಾರಿ ನಮೂದಾಗಿದೆ.
ಇದರಿಂದಾಗಿ ಅವರ ಬಗ್ಗೆ ಸಹಜವಾಗಿಯೇ ಅನುಮಾನ ಮೂಡುತ್ತದೆ. ಹಾಗಾಗಿ ಚೌಧರಿ ಅವರನ್ನು ಸಿವಿಸಿಯನ್ನಾಗಿ ನೇಮಕ ಮಾಡಬಾರದು'' ಎಂದು ಪ್ರಶಾಂತ್ ಭೂಷಣ್ ಅವರು ಮಂಗಳವಾರ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ ಎಂದು ಸಿಎನ್‍ಎನ್‍ಐಬಿಎನ್ ವರದಿ ಮಾಡಿದೆ.