ನವದೆಹಲಿ: ಟಾಪ್ 10 ಕ್ರಿಮಿನಲ್ ಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಸೇರಿಸಿ ತೀವ್ರ ಟೀಕೆಗೆ ಗುರಿಯಾಗಿರುವ ಖ್ಯಾತ ಅಂತರ್ಜಾಲ ಸರ್ಚ್ ಎಂಜಿನ್ ಗೂಗಲ್ ಸಂಸ್ಥೆ ಗುರುವಾರ ಕ್ಷಮೆ ಕೋರಿದೆ.
ತಾಂತ್ರಿಕ ಕಾರಣಗಿಳಿಂದಾಗಿ ಈ ತೊಂದರೆಯಾಗಿದ್ದು, ಗೊಂದಲ ಅಥವಾ ತಪ್ಪು ಗ್ರಹಿಕೆಯಿಂದಾಗಿ ನರೇಂದ್ರ ಮೋದಿ ಅವರ ಭಾವಚಿತ್ರ ಸೇರಿಕೊಂಡಿದೆ. ಈ ಸಮಸ್ಯೆಯಿಂದ ಯಾರಿಗಾದರು ನೋವಾಗಿದ್ದರೆ ನಾವು ಕ್ಷಮೆ ಕೋರುತ್ತೇವೆ. ಅಂತೆಯೇ ನಾವು ಸತತವಾಗಿ ಇದನ್ನು ಸರಿಪಡಿಸಲು ಕಾರ್ಯಪ್ರವೃತ್ತರಾಗಿದ್ದು, ನಮ್ಮ ಗೂಗಲ್ ಕ್ರಮಾವಳಿಯನ್ನು ಸರಿಪಡಿಸುವಂತೆ ತಂತ್ರಜ್ಞರು ಶ್ರಮಿಸುತ್ತಿದ್ದಾರೆ ಎಂದು ಗೂಗಲ್ ಹೇಳಿದೆ.
ಬ್ರಿಟೀಷ್ ಆಂಗ್ಲ ದೈನಿಕವೊಂದು ಭಾರತ ಟಾಪ್ 10 ಕ್ರಿಮಿನಲ್ಸ್ ಗಳ ಪಟ್ಟಿಯಲ್ಲಿ ನರೇಂದ್ರ ಮೋದಿ ಅವರ ಭಾವಚಿತ್ರ ಮತ್ತು ತಪ್ಪಾದ ಮೆಟಾಡೇಟವನ್ನು ಹಾಕಿಕೊಂಡಿತ್ತು. ಹೀಗಾಗಿ ಇದೇ ಗೂಗಲ್ ಸರ್ಚ್ ನಲ್ಲಿಯೂ ಕಾಣಿಸಿಕೊಂಡಿದೆ ಎಂದು ಹೇಳಿದೆ.
ನಿನ್ನೆಯಷ್ಟೇ ಗೂಗಲ್ ಸರ್ಚ್ ನ ಪ್ರಮುಖ ಹತ್ತು ಕ್ರಿಮಿನಲ್ಸ್ ಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ವಿಲಕ್ಷಣ ಫೋಟೋಗಳು ಕಂಡುಬಂದಿತ್ತು. ಗೂಗಲ್ ಸರ್ಚ್ ಮಾಡಿದಾಗ ಬರುವ ಮೊದಲ ಹತ್ತು ಫೋಟೋಗಳಲ್ಲಿ ಮೂರು ಬಾರಿ ಮೋದಿ ಫೋಟೋ ಕಾಣಿಸಿಕೊಂಡಿತ್ತು. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದಾದ್ಯಂತ ಗೂಗಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಗೂಗಲ್ ಕ್ಷಮೆ ಕೋರಿದೆ.