ದೇಶ

ವಿದ್ಯಾರ್ಥಿ ಸಂಘಟನೆ ನಿಷೇಧ ಹಿಂಪಡೆದ ಮದ್ರಾಸ್ ಐಐಟಿ

Srinivasamurthy VN

ಚೆನ್ನೈ: ದಲಿತ ವಿದ್ಯಾರ್ಥಿ ಸಂಘಟನೆಯನ್ನು ನಿಷೇಧಿಸುವ ವಿವಾದಿತ ಕ್ರಮವನ್ನು ಮದ್ರಾಸ್ ಐಐಟಿ ಶಿಕ್ಷಣ ಸಂಸ್ಥೆ ಭಾನುವಾರ ಹಿಂಪಡೆದಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಭಾನುವಾರ ಸಂಜೆ ಮದ್ರಾಸ್ ಐಐಟಿ ಶಿಕ್ಷಣ ಸಂಸ್ಥೆಯ ನಿರ್ದೇಶಕರ ಸಭೆ ನಡೆದಿದ್ದು, ಸಭೆಯಲ್ಲಿ ಅಂಬೇಡ್ಕರ್ ಪೆರಿಯಾರ್ ವಿದ್ಯಾರ್ಥಿ ಸಂಘಟನೆಯನ್ನು ನಿಷೇಧಿಸುವ ನಿರ್ಧಾರವನ್ನು ಹಿಂಪಡೆದುಕೊಳ್ಳವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಐಐಟಿ ಶಿಕ್ಷಣ ಸಂಸ್ಥೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ (ಎನ್ ಸಿಎಸ್ ಸಿ) ವಿವರ ನೀಡುವಂತೆ ನೋಟಿಸ್ ಕೂಡ ಜಾರಿಮಾಡಿತ್ತು.

ಅಲ್ಲದೆ ಮದ್ರಾಸ್ ಐಐಟಿಯ ಈ ನಿರ್ಧಾರ ತೀವ್ರ ಟೀಕೆಗೂ ಒಳಗಾಗಿತ್ತು. ವಿದ್ಯಾರ್ಥಿಪರ ಸಂಘಟನೆಗಳು ಮದ್ರಾಸ್ ಐಐಟಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸತತ ಒಂದು ವಾರದಿಂದ ತೀವ್ರ ಹೋರಾಟ ನಡೆಸಿದ್ದವು. ಅಂತಿಮವಾಗಿ ಅಂಬೇಡ್ಕರ್ ಪೆರಿಯಾರ್ ವಿದ್ಯಾರ್ಥಿ ಸಂಘಟನೆಯ ಮಾನ್ಯತೆ ರದ್ದು ಮಾಡುವ ಕ್ರಮವನ್ನು ಮದ್ರಾಸ್ ಐಐಟಿ ಹಿಂಪಡೆದಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಕಾರ್ಯವೈಖರಿಯನ್ನು ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದರು ಹಿನ್ನಲೆಯಲ್ಲಿ ಮದ್ರಾಸ್ ಐಐಟಿ ನೀತಿ ಸಂಹಿತೆಯನ್ನು ಮೀರಿದ ನೆಪವೊಡ್ಡಿ ಅಂಬೇಡ್ಕರ್ ಪೆರಿಯಾರ್ ವಿದ್ಯಾರ್ಥಿ ಸಂಘಟನೆಯ ಮಾನ್ಯತೆಯನ್ನು ರದ್ದುಗೊಳಿಸಲಾಗಿತ್ತು. ಮದ್ರಾಸ್ ಐಐಟಿಯ ಈ ವಿವಾದಾತ್ಮಕ ನಿರ್ಧಾರ ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿತ್ತು. ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಪಕ್ಷಗಳು ಈ ನಿರ್ಧಾರವನ್ನು ಖಂಡಿಸಿದ್ದೇ ಅಲ್ಲದೇ ಮದ್ರಾಸ್ ಐಐಟಿ ಆವರಣದಲ್ಲಿ ಮತ್ತು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರ ದೆಹಲಿ ನಿವಾಸದ ಎದುರೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

SCROLL FOR NEXT