ನವದೆಹಲಿ: ಏರುತ್ತಿರುವ ಜಲಕ್ಷಾಮದ ಹಿನ್ನೆಲೆಯಲ್ಲಿ ನೀರಿನ ಗರಿಷ್ಠ ಸದ್ಬಳಕೆಗೆ ಜೈ ಕ್ರಾಂತಿ ಯೋಜನೆ ಆರಂಭಿಸುತ್ತಿರುವ ಕೇಂದ್ರ ಸರ್ಕಾರ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಿದೆ.
ಜೈಕ್ರಾಂತಿ ಯೋಜನೆಯಡಿ ಹೊಸ ಪರಿಕಲ್ಪನೆಗೆ ಚಾಲನೆ ನೀಡಲಿದ್ದು ಇದಕ್ಕೆ `ಜಲಗ್ರಾಮ' ಯೋಜನೆ ಎಂದು ಹೆಸರಿಡಲಾಗಿದೆ. ದೇಶದಲ್ಲಿ 672 ಜಿಲ್ಲೆಗಳಿದ್ದು ಪ್ರತಿ ಜಿಲ್ಲೆಗೊಂದರಂತೆ ಅತಿ ಜಲಕ್ಷಾಮವಿರುವ ಗ್ರಾಮಕ್ಕೆ ಜಲಗ್ರಾಮ ಎಂದು ನಾಮಕರಣ ಮಾಡಿ, ಅಲ್ಲಿ ಅತಿ ಹೆಚ್ಚಿನ ನೀರಿನ ಸೌಲಭ್ಯ ಒದಗಿಸುವುದು ಯೋಜನೆಯ ಉದ್ದೇಶ. ಈ ವಿಷಯವನ್ನು ಜಲ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಜಲಗ್ರಾಮ ಗುರುತಿಸುವುದಕ್ಕಾಗಿ ಹಾಗೂ ಯೋಜನೆ ಕಾರ್ಯಗತಗೊಳಿಸಲು ಜಿಲ್ಲಾ ಮಟ್ಟದ ಸಮಿತಿ ನೇಮಿಸಲು ಉದ್ದೇಶಿಸಲಾಗಿದೆ. ನೀರಿನ ಬೇಡಿಕೆ, ಲಭ್ಯತೆಯ ಆಧಾರದಲ್ಲಿ ಪ್ರತಿ ಹಳ್ಳಿಗೂ ಒಂದು ಸೂಚ್ಯಂಕ ಮೌಲ್ಯ ನೀಡಿ, ಅತಿ ಹೆಚ್ಚು ಅಂಕ ಯಾವ ಹಳ್ಳಿಗೆ ಲಭಿಸುತ್ತದೆಯೋ ಅದನ್ನು ಅಭಿಯಾನದಲ್ಲಿ ಸೇರಿಸಿಕೊಳ್ಳಲಾಗುವುದು.
ಜಲಮಿತ್ರ: ಜಲಗ್ರಾಮದಲ್ಲಿ ಇದಕ್ಕಾಗಿ ದುಡಿಯಲುನ ಇಚ್ಛಿಸುವ ಸ್ಥಳೀಯರಿಗೆ ತರಬೇತಿ ನೀಡಿ ಅವರಿಗೆ `ಜಲಮಿತ್ರ' ಎಂಬ ಪದವಿ ನೀಡಲಾಗುವುದು. ಅವರು ನೀರಿನ ಮಹತ್ವ, ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಮಹಿಳೆಯರನ್ನೂ ಯೋಜನೆಯಲ್ಲಿ ಸಕ್ರಿಯಗೊಳಿಸುವ ಸಲುವಾಗಿ ಮಹಿಳಾ ಪಂಚಾಯಿತಿಯ ಸದಸ್ಯರನ್ನೂ `ಜಲ ಮಿತ್ರ'ರನ್ನಾಗಿಸುವ ಉದ್ದೇಶ ಸರ್ಕಾರಕ್ಕಿದೆ. ನೀರಿನ ಸಂರಕ್ಷಣೆ, ತ್ಯಾಜ್ಯ ನೀರಿನ ಮರುಬಳಕೆ, ಅತಿಸಣ್ಣನೀರಾವರಿ ಬಗ್ಗೆ ಅರಿವು ಮೂಡಿಸುವುದಕ್ಕೂ ಯೋಜನೆಯಲ್ಲಿ ಜಾಗ ಮಾಡಲಾಗಿದೆ.