ದೇಶ

ಎಸಿಬಿ ಮುಖ್ಯಸ್ಥರ ನೇಮಕಕ್ಕೆ ತಡೆ: ಮತ್ತೆ ತಾರಕಕ್ಕೇರಿದ ಕೇಜ್ರಿವಾಲ್-ಜಂಗ್ ಕಿತ್ತಾಟ

Lingaraj Badiger

ನವದೆಹಲಿ: ಅಧಿಕಾರಿಗಳ ನೇಮಕ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಿನ ಕಿತ್ತಾಟ ಮತ್ತೆ ತಾರಕಕ್ಕೇರಿದ್ದು, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಮುಖ್ಯಸ್ಥರಿಗೆ ಅಧಿಕಾರ ವಹಿಸಿಕೊಳ್ಳದಂತೆ ಆಪ್ ಸರ್ಕಾರ ತಡೆ ನೀಡಿದೆ.

ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ನಿನ್ನೆಯಷ್ಟೇ ದೆಹಲಿ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಮುಖೇಶ್ ಕುಮಾರ್ ಮೀನಾ ಅವರನ್ನು ಎಸಿಬಿ ಮುಖ್ಯಸ್ಥರನ್ನಾಗಿ ನೇಮಸಿದ್ದರು. ಆದರೆ ಇಂದು ನಿಮ್ಮ ಅವಶ್ಯಕತೆ ನಮಗೆ ಇಲ್ಲ. ನೀವು ವಾಪಸ್ ದೆಹಲಿ ಪೊಲೀಸ್ ಇಲಾಖೆಗೆ ಹೋಗಿ ಎಂದು ಆಪ್ ಸರ್ಕಾರ ಮೀನಾ ಅವರಿಗೆ ಸೂಚಿಸಿದೆ.

ಈ ಸಂಬಂಧ ಮೀನಾ ಅವರಿಗೆ ಪತ್ರ ಬರೆದಿರುವ ದೆಹಲಿ ಸರ್ಕಾರದ ಕಾರ್ಯದರ್ಶಿ ಹಾಗೂ ನಿರ್ದೇಶಕ(ಜಾಗೃತ) ಸುಕೇಶ್ ಕುಮಾರ್ ಜೈನ್ ಅವರು, ದೆಹಲಿ ಎಸಿಬಿಯಲ್ಲಿ ಜಂಟಿ ಆಯುಕ್ತರ ಹುದ್ದೆ ಇಲ್ಲ ಎಂದು ಹೇಳಿದ್ದಾರೆ.

'ಅಂಥಹ ಯಾವುದೇ ಹುದ್ದೆ ಇಲ್ಲಿ ಇಲ್ಲ. ಹೀಗಾಗಿ ಇಲ್ಲದ ಹುದ್ದೆಗೆ ನೀವು ಅಧಿಕಾರ ವಹಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ವಾಪಸ್ ತೆರಳುವಂತೆ' ಜೈನ್ ಅವರು ಮೀನಾಗೆ ಬರೆದ ಪತ್ರದಲ್ಲಿ ಸೂಚಿಸಿದ್ದಾರೆ.

ಈ ಮಧ್ಯೆ ಎಸಿಬಿ ಮುಖ್ಯಸ್ಥರ ನೇಮಕಕ್ಕೆ ಸಹಿ ಹಾಕಿದ್ದ ದೆಹಲಿ ಗೃಹ ಸಚಿವಾಲಯದ ಕಾರ್ಯದರ್ಶಿ ಧರಂಪಾಲ್ ಅವರನ್ನು ಸಹ ಕೇಜ್ರಿವಾಲ್ ಸರ್ಕಾರ ವರ್ಗಾವಣೆ ಮಾಡಿದ್ದು, ದೆಹಲಿ ಸಿಎಂ ಮತ್ತು ಗವರ್ನರ್ ನಡುವಿನ ಕಿತ್ತಾಟ ಮತ್ತಷ್ಟು ತೀವ್ರಗೊಂಡಿದೆ.

SCROLL FOR NEXT