ದೇಶ

ಕೇಂದ್ರ, ಉತ್ತರ ಪ್ರದೇಶ ಸರ್ಕಾರದಿಂದ ವಾರಾಣಸಿಯಲ್ಲಿ 13 ಲಕ್ಷ ಎಲ್ಇಡಿ ಬಲ್ಬ್ ವಿತರಣೆ

Srinivas Rao BV

ನವದೆಹಲಿ: ವಿದ್ಯುತ್ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಯೋಜನೆ ರೂಪಿಸಿದ್ದು  ವಾರಾಣಸಿಯಲ್ಲಿ  13 ಲಕ್ಷ  ಎಲ್.ಇ.ಡಿ ಬಲ್ಬ್ ಗಳನ್ನು ನೀಡಲು ನಿರ್ಧರಿಸಿದೆ.

ಕೇಂದ್ರ ಇಂಧನ ಖಾತೆ ಸಚಿವ ಪಿಯೂಷ್‌ ಗೋಯಲ್‌, ವಾರಾಣಸಿಯಲ್ಲಿ  ಎಲ್.ಇ.ಡಿ ಆಧಾರಿತ ಸ್ಮಾರ್ಟ್ ಸ್ಟ್ರೀಟ್ ಲೈಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, 2,28,496 ಗ್ರಾಹಕರಿಗೆ ಬಲ್ಬ್ ನೀಡಲು ಉದ್ದೇಶಿಸಲಾಗಿದೆ. ದೇಶಾದ್ಯಂತ ಎಲ್.ಇ.ಡಿ ಬಲ್ಬ್ ಗಳ ಬಳಕೆ ಹೆಚ್ಚಿಸುವ ಮೂಲಕ 10,000 ಮೆಗಾ ವ್ಯಾಟ್ ವಿದ್ಯುತ್ ಬಳೆಕೆಯಾಗುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ.

ಎಲ್.ಇ.ಡಿ ಬಲ್ಬ್ ಗಳ ಬಳಕೆ ಹೆಚ್ಚಿಸುವುದರಿಂದ ವಾರಾಣಸಿಯಲ್ಲಿ 45 ಮೆಗಾ ವ್ಯಾಟ್ ನಷ್ಟು  ವಿದ್ಯುತ್ ಬೇಡಿಕೆ ಕಡಿಮೆಯಾಗಲಿದ್ದು ಇದರಿಂದ ಸುಮಾರು 68 ಕೋಟಿ ಉಳಿತಾಯವಾಗಲಿದೆ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಬೀದಿದೀಪಗಳಿಗೂ ಸಹ ಎಲ್.ಇ.ಡಿ ಬಲ್ಬ್ ಗಳನ್ನು ಅಳವಡಿಸಲಾಗುವುದು, ಇದರಿಂದಾಗಿ ಮನೆಗಳಲ್ಲಿ ವಿದ್ಯುತ್ ಉಳಿತಾಯವಾಗುವುದರೊಂದಿಗೆ ರಸ್ತೆಬದಿಯ ದೀಪಗಳಿಂದಲೂ ವಿದ್ಯುತ್ ಬಳಕೆ   ಕಡಿಮೆಯಾಗಲಿದೆ ಎಂದಿದ್ದಾರೆ.

ಎನರ್ಜಿ ಎಫಿಶಿಯನ್ಸಿ ಸರ್ವಿಸಸ್(ಎ.ಎಸ್.ಎಸ್.ಎಲ್) ಸಂಸ್ಥೆ ವಾರಾಣಸಿಯಲ್ಲಿ ಸುಮಾರು  36 ,077 ಬೀದಿ ದೀಪಗಳಿಗೆ ಎಲ್.ಇ.ಡಿ ಬಲ್ಬ್ ಗಳನ್ನು ಅಳವಡಿಸಲಿದೆ. 5 -7 ವರ್ಷಗಳಲ್ಲಿ ವಿದ್ಯುತ್ ಉಳಿತಾಯದಿಂದಾಗುವ ಲಾಭದಲ್ಲಿ ಸ್ಥಳೀಯ ನಗರ ಪಾಲಿಕೆಗಳು ಎಎಸ್ಎಸ್ಎಲ್ ಗೆ ಹಣ ಪಾವತಿ ಮಾಡಲಿವೆ.  ಕಡಿಮೆ ದರದಲ್ಲಿ ಎಲ್.ಇ.ಡಿ ಬಲ್ಬ್ ಗಳನ್ನು ವಿತರಿಸುವ ಯೋಜನೆ ಜಾರಿಗೆ ಬರಲಿದೆ ಎಂದು ಇಂಧನ ಖಾತೆ ಸಚಿವ ಗೋಯಲ್ ಕಳೆದ ತಿಂಗಳು ಹೇಳಿದ್ದರು. ಅದರಂತೆಯೇ ಈಗ ಕಡಿಮೆ ದರದಲ್ಲಿ ಎಲ್.ಇ.ಡಿ ಬಲ್ಬ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಎಲ್.ಇ.ಡಿ  ಬಲ್ಬ್ ಗಳು ಪೂರ್ಣಪ್ರಮಾಣದಲ್ಲಿ ದೇಶಾದ್ಯಂತ ಬಳಕೆಯಾಗಲಿದ್ದು, ಅತಿ ಹೆಚ್ಚು ವಿದ್ಯುತ್ ಉಳಿತಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

SCROLL FOR NEXT