ನವದೆಹಲಿ: ನಕಲಿ ಕಾನೂನು ಪದವಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ದೆಹಲಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಬಂಧನದಲ್ಲಿ ಗೃಹ ಸಚಿವಾಲಯದ ಪಾತ್ರ ಇಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ.
ತೋಮರ್ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ರಾಜನಾಥ್ ಸಿಂಗ್, ಪ್ರಕರಣದಲ್ಲಿ ಗೃಹ ಸಚಿವಾಲಯ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ, ಪೊಲೀಸರು ಪ್ರಕರಣದ ತನಿಖೆ ನಡೆಸಿ ಕಾನೂನು ಪ್ರಕಾರವೇ ಕ್ರಮ ತೆಗೆದುಕೊಂಡಿದ್ದಾರೆ. ಈ ದೆಹಲಿ ಪೊಲೀಸ್ ಪಿಆರ್‌ಒ ಮಾಧ್ಯಮಕ್ಕೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ತೋಮರ್ ಅವರನ್ನು ದಿಢೀರ್ ಬಂಧಿಸಿರುವ ದೆಹಲಿ ಪೊಲೀಸ್ ಕ್ರಮದ ಬಗ್ಗೆ ಆಮ್ ಆದ್ಮಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ದೆಹಲಿ ಸರ್ಕಾರದ ಮೇಲೆ ಒತ್ತಡ ಹೇರುವ ಕುತಂತ್ರ ನಡೆಸಿದೆ ಎಂದು ಆರೋಪಿಸಿದೆ.
ತೋಮರ್ ವಿರುದ್ಧ ದೆಹಲಿಯ ಬಾರ್ ಕೌನ್ಸಿಲ್ ನೀಡಿದ ದೂರಿನನ್ವಯ ಸೋಮವಾರ ರಾತ್ರಿ ಎಫ್ಐಆರ್ ದಾಖಲಿಕೊಂಡಿದ್ದ ದೆಹಲಿ ಪೊಲೀಸರು, ಇಂದು ಬೆಳಗ್ಗೆ ದೆಹಲಿ ಕಾನೂನು ಸಚಿವರನ್ನು ಬಂಧಿಸಿ ವಸಂತ ವಿಹಾರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ತೋಮರ್ ಅವರು ತಮ್ಮ ವಿದ್ಯಾರ್ಹತೆ ಕುರಿತು ಸಲ್ಲಿಸಿದ್ದ ಪದವಿ ಪ್ರಮಾಣ ಪತ್ರ ನಕಲಿ ಎಂಬ ವಿಷಯ ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿತೇಂದ್ರ ಸಿಂಗ್ ವಿರುದ್ದ ವಿಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ತನಿಖೆ ನಡೆಸಲು ಆಗ್ರಹಿಸಿದ್ದವು.