ನವದೆಹಲಿ: ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ನಕಲಿ ಪದವಿ ಪ್ರಮಾಣ ಪತ್ರ ವಿವಾದದಿಂದ ತೀವ್ರ ಮುಜುಗರ ಅನುಭವಿಸುತ್ತಿರುವ ಆಮ್ ಆದ್ಮಿ ಪಕ್ಷ, ತೋಮಾರ್ ವಿರುದ್ಧ ಆಂತರಿಕ ತನಿಖೆ ನಡೆಸಲು ನಿರ್ಧರಿಸಿದೆ. ಪಕ್ಷದ ಆಂತರಿಕ ಲೋಕಪಾಲ್ ತೋಮಾರ್ ವಿರುದ್ಧ ತನಿಖೆ ನಡೆಸುವುದಾಗಿ ಆಪ್ ಮುಖಂಡ ಸಂಜಯ್ ಸಿಂಗ್ ಘೋಷಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ಸಿಂಗ್, ಜಿತೇಂದ್ರ ತೋಮಾರ್ ನಕಲಿ ಪದವಿ ಪ್ರಮಾಣ ವಿವಾದ ಸಂಬಂಧ ಈಗಾಗಲೇ ಕಾನೂನು ತಜ್ಞರ ಸಲಹೆ ಪಡೆಯಲಾಗಿದೆ ಎಂದರು. ಪ್ರಕರಣ ಸಂಬಂಧ ದೆಹಲಿ ನಾಗರಿಕರಲ್ಲಿ ಹಲವು, ಸಂಶಯ ಹಾಗೂ ಪ್ರಶ್ನೆಗಳು ಎದ್ದಿವೆ. ಹೀಗಾಗಿ ಅವರಿಗೆ ಉತ್ತರಿಸಬೇಕಾಗಿದೆ ಎಂದರು.
ಇನ್ನು ತಮ್ಮ ವಿದ್ಯಾರ್ಹತೆ ಬಗ್ಗೆ ತಪ್ಪು ಮಾಹಿತಿ ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ಸಂಸದ ರಾಮಶಂಕರ ಕಟಾರಿಯಾ ಅವರ ನಕಲಿ ಪದವಿಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ತೋಮಾರ್ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಂಡಿರುವುದಾಗಿ ಹೇಳಿರುವ ದೆಹಲಿ ಪೊಲೀಸರು ಸ್ಮೃತಿ ಇರಾನಿ ಹಾಗೂ ಕಟಾರಿಯಾ ಪ್ರಕರಣದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಶೇ.30ರಷ್ಟು ಸಚಿವರು ಗಂಭೀರ ಅಪರಾಧ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು, ಸದಾ ವಿದೇಶ ಪ್ರವಾಸದಲ್ಲಿ ಬ್ಯೂಸಿಯಾಗಿರುವ ನರೇಂದ್ರ ಮೋದಿಗೆ ಸಮಯವಿಲ್ಲ ಎಂದು ಆಪ್ ಮುಖಂಡರು ಆರೋಪಿಸಿದ್ದಾರೆ.