ದೇಶ

ಶೀಘ್ರದಲ್ಲೇ ಇಸಿಸ್ ಕೈಗೆ ಬರಲಿದೆ ಅಣ್ವಸ್ತ್ರ ಬಲ?

Vishwanath S

ಲಂಡನ್: 'ಇಸಿಸ್ ಉಗ್ರಪಡೆ ಈಗಾಗಲೇ ಪರಮಾಣು ಶಸ್ತ್ರಾಸ್ತ್ರ ತಯಾರಿಸಲು ಬೇಕಿರುವ ಎಲ್ಲ ವಸ್ತುಗಳನ್ನು ಸಿದ್ಧವಿಟ್ಟುಕೊಂಡಿದೆ'' ಎಂಬ ಮಾಹಿತಿಯನ್ನು ಆಸ್ಟ್ರೇಲಿಯಾದ ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿವೆ.

ದಿ ಇಂಡಿಪೆಂಡೆಂಟ್ ಪತ್ರಿಕೆಗೆ ಈ ಕುರಿತು ವಿವರಿಸಿರುವ ಗುಪ್ತಚರ ಸಂಸ್ಥೆಗಳು, ರಂಜಾನ್ ತಿಂಗಳ ಪ್ರಾರಂಭದಿಂದ ಇಸಿಸ್ ತನ್ನ ಚಟುವಟಿಕೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳ ಸುಳಿವು ನೀಡಿದೆ. ಪಾಕಿಸ್ತಾನದಿಂದ ತಂತ್ರಜ್ಞಾನ ಮತ್ತು ಉಗ್ರಚಟುವಟಿಕೆಗೆ ಬೇಕಿರುವ ಶಸ್ತ್ರಾಸ್ತ್ರಳನ್ನು, ಸ್ಫೋಟಕಗಳನ್ನು ಪಡೆಯತ್ತಿದೆ ಎಂಬ ಶಂಕೆಯನ್ನು ಈ ಹಿಂದೆ ಭಾರತೀಯ ಗುಪ್ತಚರ ಸಂಸ್ಥೆಗಳು ವರದಿ ಮಾಡಿದ್ದವು. ಅದರ ಬೆನ್ನಲ್ಲೇ ಇಸಿಸ್ ಕೂಡ ತನ್ನ ದಾಬಿಕ್ ಮ್ಯಾಗಜಿನ್‍ನಲ್ಲಿ ಸಾಮೂಹಿಕ ನಾಶ ಮಾಡುವ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಹೆಬ್ಬಯಕೆ ವ್ಯಕ್ತಪಡಿಸಿಕೊಂಡಿತ್ತು.

ಪರಮಾಣು ಬಾಂಬ್ ತಯಾರಿಕೆಗೆ ಬೇಕಾದ ವಸ್ತುಗಳನ್ನು ಇಸಿಸ್ ಅಲ್ಲಿನ ಸರ್ಕಾರಿ ಸ್ವಾಮ್ಯದ ಆಸ್ಪತ್ರೆ ಮತ್ತು ಸಂಶೋಧನ ಸಂಸ್ಥೆಗಳಿಂದಲೇ ವಶಪಡಿಸಿಕೊಳ್ಳುತ್ತಿದೆ ಎಂದು ಆಸ್ಟ್ರೇಲಿಯದ ವಿದೇಶಾಂಗ ಸಚಿವ ಜೂಲಿ ಬಿಷಪ್ ಆತಂಕ ತೋರಿದ್ದಾರೆ. ಖಲೀಫತ್ ಘೋಷಣೆಯ ಒಂದು ವರ್ಷದ ಸಂಭ್ರಮಾಚರಣೆ ಹಾಗೂ ರಂಜಾನ್ ತಿಂಗಳ ಆರಂಭದ ನೆಪದಲ್ಲಿ ಇಸಿಸ್ ತನ್ನ ಉಗ್ರಚಟುವಟಿಕೆ ಹೆಚ್ಚಿಸಲಿದೆ ಎಂಬ ಕಳವಳವನ್ನೂ ವ್ಯಕ್ತಪಡಿದ್ದಾರೆ.

ಸಂಕಷ್ಟದತ್ತ ಅಲ್ ಕೈದಾ: ಇಸಿಸ್‍ನಿಂದ ಬೇರ್ಪಟ್ಟ ನಂತರ ಅಲ್ ಕೈದಾ ಬಡವಾಗುತ್ತಿದೆ ಎಂಬ ವರದಿಗಳು ಬರತೊಡಗಿವೆ. ಸಂಘಟನೆಯ ಮುಖ್ಯಸ್ಥ ಆಯ್ಮಾನ್ ಅಲ್ ಜವಾಹಿರಿಯನ್ನು ಸ್ಥಾನದಿಂದ ಕೆಳಗಿಳಿಸಿದ್ದು, ಅಲ್ ಕೈದಾ ಈಗ ನಾಯಕತ್ವವಿಲ್ಲದೆ ನಂಬಿಕೆ ಆಧಾರದಲ್ಲಿ ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸಲಿದೆ ಎಂದು ಗಾರ್ಡಿಯನ್ ಪತ್ರಿಕೆಯ ವರದಿಗಳು ತಿಳಿಸಿವೆ. ಹಣಕಾಸಿನ ಮುಗ್ಗಟ್ಟು ಎದುರಾಗಿರುವುದು ಇದಕ್ಕೆಲ್ಲ ಮೂಲ ಕಾರಣ ಎಂದು ಗಾರ್ಡಿಯನ್ ವಿಶ್ಲೇಷಿಸಿದೆ.

ಮೊದಲ ಅಮೆರಿಕ ಯೋಧ ಬಲಿ: ಸಿರಿಯಾದಲ್ಲಿ ಮುಂದುವರೆದಿರುವ ಇಸಿಸ್ ವಿರುದ್ಧ ಸೆಣಸಾಟದಲ್ಲಿ ಅಮೆರಿಕದ ಯೋಧ ಪ್ರಾಣ ತೆತ್ತಿದ್ದಾನೆ. ಇದು ಇಸಿಸ್ ಪಡೆದ ಮೊದಲ ಅಮೆರಿಕನ್ ಬಲಿ. ಜೂ3ರಂದು ಸಿರಿಯಾದ ಹಳ್ಳಿಯೊಂದರಲ್ಲಿ ಕುರ್ದಿಶ್ ಸೈನ್ಯದ ಪರ ಇಸಿಸ್ ಎದುರು ಹೋರಾಡುವಾಗ ಕೀಥ್ ಬ್ರೂಮ್ ಫೀಲ್ಡ್ ಎಂಬ ಅಮೆರಿಕದ ಪ್ರಜೆ ಸಾವಿಗೀಡಾದ್ದಾನೆ. ಈ ಮೊದಲು ಕುರ್ದಿಶ್ ಸೈನ್ಯದ ಪರವಾಗಿ ಯುದ್ಧಕ್ಕಿಳಿದ ಬ್ರಿಟಿಷ್, ಜರ್ಮನ್ ಹಾಗೂ ಆಸ್ಟ್ರೇಲಿಯದ ಸೈನಿಕರು ಇಸಿಸ್‍ನಿಂದ ಹತರಾಗಿದ್ದರು. ಅಮೆರಿಕದ ಬೆಂಬಲದೊಂದಿಗೆ ಹೋರಾಡುತ್ತಿರುವ ಕುರ್ದಿಶ್ ಸೈನ್ಯದಲ್ಲಿ ಸ್ವಇಚ್ಛೆಯಿಂದ ಸೇರಿಕೊಂಡಿರುವ ಹಲವು ಪಾಶ್ಚಾತ್ಯ ಯುವ ಸೈನಿಕರಿದ್ದಾರೆ.

SCROLL FOR NEXT