ಮುಂಬೈ: ಕಳೆದ ಮಂಗಳವಾರ ಮಧ್ಯರಾತ್ರಿ ವೇಳೆ ತಮ್ಮ ಆಡಿ ಕ್ಯು3 ಕಾರನ್ನು ಟ್ಯಾಕ್ಸಿಯೊಂದಕ್ಕೆ ಅಪಘಾತಕ್ಕೀಡುಮಾಡಿ ಇಬ್ಬರ ಸಾವಿಗೆ ಕಾರಣರಾದ ಕಾರ್ಪೋರೇಟ್ ವಕೀಲೆ ಜಹನ್ವಿ ಗಡ್ಕರ್ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು, ಜೂನ್ 26ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಆರೋಪಿಗೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಬಂಧನಗೊಂಡ ಕೂಡಲೇ ಜಹನ್ವಿ ಅರ್ಜಿ ಸಲ್ಲಿಸಿದ್ದಾರೆ. ಬರುವ ಸೋಮವಾರ ಅರ್ಜಿ ವಿಚಾರಣೆ ನಡೆಯಲಿದೆ.
ಜಹನ್ವಿ ಅವರು ಅಂದು ರಾತ್ರಿ ಐರಿಶ್ ಪಬ್ ವೊಂದಕ್ಕೂ ಭೇಟಿ ನೀಡಿದ್ದು, ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಮಾಡಿದ್ದರು. ಅವರ ವಿಚಾರಣೆ ಪೂರ್ಣಗೊಳಿಸಲು ಇನ್ನು ಹೆಚ್ಚಿನ ಎರಡು ದಿನ ಕಸ್ಟಡಿಯಲ್ಲಿ ಇರಿಸಬೇಕೆಂದು ನ್ಯಾಯಾಧೀಶರ ಬಳಿ ಪೊಲೀಸರು ಮನವಿ ಮಾಡಿದ್ದಾರೆ. ಆದರೆ ಜಹನ್ವಿ ಅವರಿಗೆ ಆರೋಗ್ಯ ಸಮಸ್ಯೆಯಿದೆ. ಅವರಿಗೆ ಅಪಫಾತದಲ್ಲಿ ಗಾಯಗಳಾಗಿದ್ದರೂ ಸಹ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ನೀಡುತ್ತಿಲ್ಲ ಎಂದು ಅವರ ಪರ ವಕೀಲ ಮಹೇಶ್ ಸಬ್ನಿಸ್ ಆರೋಪಿಸಿದ್ದಾರೆ.
ಅವರಿಗೆ ಪೊಲೀಸ್ ಕಸ್ಟಡಿಯಲ್ಲಿ ಹಾಕಿ ವಿಚಾರಣೆ ನಡೆಸುವ ಬದಲು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದಾಗಿತ್ತು ಎಂದು ಹೇಳಿದರು.
ಜಹನ್ವಿ ಅವರು ಘಟನೆ ನಡೆಯುತ್ತಿದ್ದ ವೇಳೆ ಸಂಪೂರ್ಣವಾಗಿ ಮೈಮರೆತಿದ್ದರು. ಅವರಿಗೆ ರಸ್ತೆಯಲ್ಲಿ ತಪ್ಪು ಹಾದಿಯಲ್ಲಿ ಹೋಗುತ್ತಿದ್ದೇನೆ ಎಂಬುದು ಸಹ ತಿಳಿದಿರಲಿಲ್ಲ. ಅವರು ಅಷ್ಟೊಂದು ಮೈ ಮರೆತಿದ್ದರೆ ಘಟನೆ ಬಗ್ಗೆ ಹೇಗೆ ವಿವರಿಸುತ್ತಿ ದ್ದರು ಎಂದು ಮಹೇಶ್ ಸಬ್ನಿಸ್ ವಾದ. ತಮ್ಮ ಕಕ್ಷಿದಾರನಿಗೆ ನ್ಯಾಯಾಂಗ ಬಂಧನ ಮಾತ್ರ ವಿಧಿಸಬೇಕೆಂದು ಅವರು ವಾದಿಸಿದರು.