ಮುಂಬೈ: ಮ್ಯಾಗಿ ನೂಡಲ್ಸ್ ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಮ್ಯಾಗಿ ಮಾರಾಟ ನಿಷೇಧಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನೀಡಿದ್ದ ಆದೇಶ ಪ್ರಶ್ನಿಸಿ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದ ನೆಸ್ಲೆ ಕಂಪೆನಿಗೆ ಅಲ್ಲಿಯೂ ಜಯ ಸಿಕ್ಕಿಲ್ಲ.
ಮುಂದಿನ ಆದೇಶ ಬರುವವರೆಗೆ 2 ಮಿನಿಟ್ ಮ್ಯಾಗಿ ನೂಡಲ್ಸ್ ಮಾರಾಟವನ್ನು ಹಿಂಪಡೆಯಬೇಕೆಂದು ಕೋರ್ಟ್ ಶುಕ್ರವಾರ ಆದೇಶ ನೀಡಿದೆ. ಅರ್ಜಿಯ ಮುಂದಿನ ವಿಚಾರಣೆಯನ್ನು ಈ ತಿಂಗಳ 30ಕ್ಕೆ ಮುಂದೂಡಿದೆ.
ಆರೋಗ್ಯಕ್ಕೆ ಹಾನಿಕಾರಕ ಎಂಬ ಕಾರಣದಿಂದ ಎಲ್ಲಾ 9 ಬಗೆಯ ಮ್ಯಾಗಿ ನೂಡಲ್ಸ್ ಮಾರಾಟವನ್ನು ನಿಲ್ಲಿಸಬೇಕೆಂದು ಆಹಾರ ಸುರಕ್ಷತಾ ಪ್ರಾಧಿಕಾರ ನೀಡಿದ್ದ ಆದೇಶವನ್ನು ನ್ಯಾಯಾಲಯ ಪರಿಶೀಲಿಸುವಂತೆ ನೆಸ್ಲೆ ಕಂಪೆನಿ ಮುಂಬೈ ಹೈಕೋರ್ಟ್ಗೆಗೆ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ವಿ.ಎಂ.ಖಾನಡೆ ಮತ್ತು ಬಿ.ಪಿ ಕೊಲಬವಾಲಾ ಅವರಿದ್ದ ವಿಭಾಗೀಯ ಪೀಠ, ವಿಚಾರಣೆಯನ್ನು ಈ ತಿಂಗಳ 30ಕ್ಕೆ ಮುಂದೂಡಿ ಅಲ್ಲಿಯವರೆಗೆ ಮ್ಯಾಗಿ ನೂಡಲ್ಸ್ ಮಾರಾಟವನ್ನು ನಿಷೇಧಿಸಿದೆ.
ಸ್ವಾಭಾವಿಕ ನ್ಯಾಯದ ತತ್ವವನ್ನು ಪ್ರಾಧಿಕಾರ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉಲ್ಲಂಘಿಸಿ ಮ್ಯಾಗಿ ಮಾರಾಟಕ್ಕೆ ನಿಷೇಧ ಹೇರಿವೆ ಎಂದು ನೆಸ್ಲೆ ಕಂಪೆನಿ ತನ್ನ ಅರ್ಜಿಯಲ್ಲಿ ದೂರಿತ್ತು. ನೆಸ್ಲೆ ಕಂಪೆನಿಯ ಈ ಆರೋಪಕ್ಕೆ ಉತ್ತರಿಸುವಂತೆ ನ್ಯಾಯಾಲಯ ಕೇಂದ್ರ, ರಾಜ್ಯ ಹಾಗೂ ಆಹಾರ ಸುರಕ್ಷತಾ ಪ್ರಾಧಿಕಾರಕ್ಕೆ ಸೂಚಿಸಿದೆ.