ನವದೆಹಲಿ: ದೆಹಲಿಯಲ್ಲಿ ತ್ಯಾಜ್ಯ ಸಮಸ್ಯೆ ಹೆಚ್ಚಾಗಿದ್ದು, ಇದೀಗ ದೆಹಲಿಯ ಕಸ ಗುಡಿಸಲು ಸ್ವತಃ ಆಪ್ ಹಾಗೂ ಬಿಜೆಪಿಯ ಸಚಿವರೇ ಶನಿವಾರ ರಸ್ತೆಗಳಿದ್ದಾರೆ.
ದೆಹಲಿ ಸ್ವಚ್ಛತಾ ಕಾರ್ಯವು ಆಮ್ ಆದ್ಮಿ ಪಕ್ಷದ ನಾಯಕ ಅಶುತೋಷ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಹ ಭಾಗಿಯಾಗಿದ್ದಾರೆ. ದೆಹಲಿ ಸ್ವಚ್ಛತಾ ಕಾರ್ಯಕ್ಕೆ ಈಗಾಗಲೇ ಬಿಜೆಪಿ ಹಾಗೂ ಆಪ್ ನ ಹಲವಾರು ಕಾರ್ಯಕರ್ತರು ಕೈ ಜೋಡಿಸಿದ್ದು ದೆಹಲಿ ಕಸ ಗುಡಿಸುವ ಕಾರ್ಯ ಮುಂದುವರೆದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಎಲ್ಲರೂ ಕೈ ಜೋಡಿಸಬೇಕಿದ್ದು, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನ ಆಂತರಿಕ ಜಗಳದಿಂದಾಗಿ ಇಂದು ದೆಹಲಿಯ ಜನ ಸಂಕಷ್ಟದಲ್ಲಿ ಕಾಲ ಕಳೆಯುವಂತಾಗಿದೆ. ಕೂಡಲೇ ಅಧಿಕಾರಿಗಳು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಆಪ್ ಪಕ್ಷದ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.
ದೆಹಲಿ ಸ್ವಚ್ಛತೆಗಾಗಿ ಬಿಜೆಪಿ ಪಕ್ಷ 48 ಗಂಟೆಗಳ ಕಾಲ ಕೆಲಸ ಮಾಡಲು ನಿರ್ಧರಿಸಿದೆ ಎಂದು ಬಿಜೆಪಿ ಮುಖ್ಯಸ್ಥ ಸತೀಶ್ ಉಪಾಧ್ಯಯ್ ಅವರು ಹೇಳಿದ್ದಾರೆ.
ದೆಹಲಿಯ 3 ಮೂರು ಪುರಸಭೆಗಳಲ್ಲಿ ಪ್ರಸ್ತುತ ಬಿಜೆಪಿ ಆಡಳಿತವಿದ್ದು, ಕಳೆದ ಹಲವು ತಿಂಗಳುಗಳಿಂದ ಇಲ್ಲಿನ ಪೌರ ಕಾರ್ಮಿಕರಿಗೆ ವೇತನ ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ಪೌರಕಾರ್ಮಿಕರು ವೇತನ ನೀಡುವವರೆಗೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿ ಧರಣಿಗೆ ಕುಳಿತಿದ್ದರು. ಪೌರ ಕಾರ್ಮಿಕರ ಈ ಕ್ರಮವನ್ನು ಕಂಡ ದೆಹಲಿ ಸರ್ಕಾರ ಎಚ್ಚೆತ್ತುಕೊಂಡು 494 ಕೋಟಿ ಹಣವನ್ನು ಶುಕ್ರವಾರ ಬಿಡುಗಡೆ ಮಾಡಿತ್ತು. ಆದರೂ ಕಾರ್ಮಿಕರು ಇಂದು ಕೆಲಸಕ್ಕೆ ಹಾಜರಾಗಿಲ್ಲ. ಹೀಗಾಗಿ ಎಎಪಿ ಹಾಗೂ ಬಿಜೆಪಿ ಕಾರ್ಯಕರ್ತರೇ ದೆಹಲಿ ಸ್ವಚ್ಛತಾ ಕಾರ್ಯವನ್ನು ಕೈಗೆತ್ತುಕೊಂಡಿದ್ದು, ದೆಹಲಿಯಾದ್ಯಂತ ಕಸವಿಲೇವಾರಿ ಕಾರ್ಯಕ್ಕೆ ರಸ್ತೆಗಿಳಿದಿವೆ.