ನವದೆಹಲಿ: ಕರಾವಳಿ ರಕ್ಷಣಾ ಪಡೆಯ ಮೂವರು ಸಿಬ್ಬಂದಿ ಇದ್ದ ವಿಮಾನ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾನದ ಸಿಗ್ನಲ್ ಪತ್ತೆಯಾಗಿರುವುದಾಗಿ ಶನಿವಾರ ತಿಳಿದುಬಂದಿದೆ.
ಚೆನ್ನೈ ವಿಮಾನ ನಿಲ್ದಾಣದಿಂದ ಜೂ.8ರಂದು ಸಂಜೆ ಟೇಕಾಫ್ ಆದ ವಿಮಾನ, ಎಂದಿನಂತೆ ನಿಲ್ದಾಣಕ್ಕೆ ವಾಪಸಾಗಿರಲಿಲ್ಲ. ನಂತರ ರಾತ್ರಿ 11 ಗಂಟೆ ಸುಮಾರಿಗೆ ಕಡೆಯ ಬಾರಿ ಸಂಪರ್ಕಕ್ಕೆ ಸಿಕ್ಕ ವಿಮಾನ ಚೆನ್ನೈನಿಂದ ಸುಮಾರು 95 ಸಾವಿರ ಮೈಲಿಗಳಷ್ಟು ದೂರದಲ್ಲಿದೆ ಎಂದು ತಿಳಿದುಬಂದಿತ್ತು. ಪುದುಚೇರಿಯ ಕರೈಕಾಲ್‌ನಲ್ಲಿ ವಿಮಾನ ಕಡೆಯ ಬಾರಿಗೆ ರಾಡರ್ ಸಂಪರ್ಕಕ್ಕೆ ಸಿಕ್ಕಿತ್ತು, ನಾಪತ್ತೆಯಾದ ವಿಮಾನದಲ್ಲಿ ಇಬ್ಬರು ಪೈಲಟ್ ಹಾಗೂ ವೀಕ್ಷಕರೊಬ್ಬರು ಇದ್ದರು ಎಂದು ಹೇಳಲಾಗುತ್ತಿತ್ತು.
ನಾಪತ್ತೆಯಾಗಿದ್ದ ಡೊರ್ನಿಯರ್ ವಿಮಾನದ ಪತ್ತೆಗಾಗಿ ಐಎನ್ಎಸ್ ಸಂಧ್ಯಕ್ ಸೇರಿದಂತೆ ನೌಕಾದಳದ ಹಡಗುಗಳು ಶೋಧ ಕಾರ್ಯ ನಡೆಸುತ್ತಿದ್ದವು. ಇದೀಗ ವಿಮಾನ ನಾಪತ್ತೆಯಾದ ಸ್ಥಳದಲ್ಲೇ ವಿಮಾನದ ಸುಳಿವು ಸಿಕ್ಕಿದ್ದು, ವಿಮಾನದ ಸೋನಾರ್ ಲೊಕೇಷನ್ ಬೀಕನ್ ನಿಂದ ಆಗಾಗ ಸಿಗ್ನಲ್ ಸಿಗುತ್ತಿದೆ ಎಂದು ಐಎನ್ಎಸ್ ಸಂಧ್ಯಕ್ ಹೇಳಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯದ ವಕ್ತಾರ ಸಿತಾಂಚು ಕಾರ್ ಅವರು, ವಿಮಾನ ಪತನವಾಗಿರುವ ಸ್ಥಳದಲ್ಲಿ ಈಗಾಗಲೇ ತೈಲಯುಕ್ತ ನೀರು ಪತ್ತೆಯಾಗಿದ್ದು, ತೈಲಯುಕ್ತ ನೀರನ್ನು ಪರೀಕ್ಷೆಗಾಗಿ ಲ್ಯಾಬ್ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ತೈಲಯುಕ್ತವಾಗಿರುವ ಸಮುದ್ರದ ನೀರಿನ ಚಿತ್ರಗಳನ್ನು ತಮ್ಮ ಟ್ವಿಟ್ಟರ್ ಖಾತೆ ಮೂಲಕ ಹಂಚಿಕೆ ಮಾಡಿದ್ದಾರೆ.