ಇಸ್ಲಾಮಾಬಾದ್: ``ಕಾಶ್ಮೀರದ ವಿಚಾರದಲ್ಲಾಗಲೀ, ಹೊಸ ಬಂದರುಗಳ ಅಭಿವೃದ್ಧಿ ವಿಚಾರದಲ್ಲಾಗಲೀ ಅಥವಾ ನೈಸರ್ಗಿಕ ಸಂಪನ್ಮೂಲಗಳ ಬಳಕೆಯ ವಿಚಾರದಲ್ಲಾಗಲೀ
ನಮ್ಮ ಹಿತಾಸಕ್ತಿಯನ್ನು ರಕ್ಷಿಸಲು, ನಾವು ಏನು ಬೇಕಿದ್ದರೂ ಮಾಡಲು ಸಿದ್ಧ''. ಇದು ಭಾರತಕ್ಕೆ ಪಾಕಿಸ್ತಾನ ನೀಡಿರುವ ಪರೋಕ್ಷ ಎಚ್ಚರಿಕೆ.
ಶುಕ್ರವಾರ ಜಮ್ಮುವಿನ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಶನಿವಾರ ಭಾರತದ ಮೇಲೆಯೇ ಗೂಬೆ ಕೂರಿಸಿದೆ. ಅಷ್ಟೇ ಅಲ್ಲ, ``ನಮಗೆ ಶತ್ರು ಪಡೆಗಳ ಸಂಚಿನ ಬಗ್ಗೆ ಅರಿವಿದೆ. ಅವರನ್ನು ಹೇಗೆ ಮಟ್ಟ ಹಾಕಬೇಕೆಂಬುದು ನಮಗೆ ಗೊತ್ತಿದೆ'' ಎಂದೂ ಹೇಳಿದೆ.
ಅಸ್ಥಿರತೆಗೆ ಯತ್ನ: ಶನಿವಾರ ಇಸ್ಲಾಮಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕ್ ಸೇನಾ ಮುಖ್ಯಸ್ಥ ರಹೀಲ್ ಷರೀಫ್, ಭಾರತವೇ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ಆರೋಪಿಸಿದ್ದಾರೆ. ಜತೆಗೆ, ``ಭಾರತವು ಈ ಮೂಲಕ ಪಾಕಿಸ್ತಾನದಲ್ಲಿ ಅಸ್ಥಿರತೆ ಉಂಟುಮಾಡಲು ಯತ್ನಿಸುತ್ತಿದೆ. ಅಲ್ಲದೆ, ಪಾಕ್‍ನ ಅನೇಕ ಸ್ಥಳಗಳಲ್ಲಿ ಉಗ್ರರಿಗೆ ಬೆಂಬಲ ನೀಡುತ್ತಿದೆ'' ಎಂದೂ ಹೇಳಿದ್ದಾರೆ.
``ಕದನವಿರಾಮ ಉಲ್ಲಂಘನೆ, ಬಲೂಚಿಸ್ತಾನದಲ್ಲಿ ನಡೆದ ರಕ್ತದೋಕುಳಿಯು
ಶತ್ರುರಾಷ್ಟ್ರದ ಉದ್ದೇಶವೇನು ಎಂಬುದನ್ನು ತೋರಿಸುತ್ತಿದೆ'' ಎಂದಿರುವ ಷರೀಫ್ ಹೆಸರು
ಹೇಳದೆ ಭಾರತದ ಮೇಲೆ ಕಿಡಿಕಾರಿದ್ದಾರೆ.
``ಪಾಕಿಸ್ತಾನವು ಶಾಂತಿಗಾಗಿ ಇತರೆ ರಾಷ್ಟ್ರಗಳೊಂದಿಗೆ ಸಹಕಾರ ನೀಡಲು ಸಿದ್ಧವಿದೆ. ಆದರೆ, ನಾವು ಎಂದಿಗೂ ನಮ್ಮ ದೇಶದ ಹಿತಾಸಕ್ತಿ, ಸಮಗ್ರ ಹಕ್ಕುಗಳು ಮತ್ತು ರಾಷ್ಟ್ರೀಯ ಅಭಿಮಾನದೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ'' ಎಂದೂ ಹೇಳಿದ್ದಾರೆ ಷರೀಫ್.
ಗೊಂದಲ ಪರಿಹರಿಸಿಕೊಳ್ಳಿ: ಈ ನಡುವೆ, ಭಾರತ ಮತ್ತು ಪಾಕ್ ತಮ್ಮ ನಡುವಿನ ಗೊಂದಲಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಲಿ ಎಂದು ಅಮೆರಿಕ ಸಲಹೆ ನೀಡಿದೆ.
``ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಲಬೇಕೆಂದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉತ್ತಮ ಬಾಂಧವ್ಯ ಅತ್ಯಗತ್ಯ. ತಮ್ಮ ನಡುವಿನ ಗೊಂದಲ ಪರಿಹರಿಸಿಕೊಳ್ಳಲು ಎರಡೂ ರಾಷ್ಟ್ರಗಳು ಕೈಗೊಳ್ಳುವ ಯಾವುದೇ ಕ್ರಮವನ್ನೂ ಸ್ವಾಗತಿಸಲು ನಾವು ಸಿದ್ಧ'' ಎಂದು ಅಮೆರಿಕ ಹೇಳಿದೆ.