ಫ್ಲೋರಿಡಾ: ಕ್ಷುಲ್ಲಕ ಕಾರಣಕ್ಕೆ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಅಮೆರಿಕದಲ್ಲಿ ಹತ್ಯೆ ಮಾಡಲಾಗಿದೆ.
ಹೈದರಾಬಾದ್ ಮೂಲದ 23 ವರ್ಷದ ವಿದ್ಯಾರ್ಥಿ ಸಾಯಿಕಿರಣ್ ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಫ್ಲೋರಿಡಾದಲ್ಲಿ ವಾಸವಿರುವ ಸಾಯಿಕಿರಣ್ ನಿನ್ನೆ ಮಧ್ಯಾಹ್ನ ತಮ್ಮ ಮನೆಯ ಹೊರವಲಯದಲ್ಲಿ ಸ್ನೇಹಿತ ಶ್ರೀಕಾಂತ್ ರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಕೆಲ ದುಷ್ಕರ್ಮಿಗಳು ಸಾಯಿಕಿರಣ್ ಕೈಯಲ್ಲಿದ್ದ ಐಫೋನ್ ಮೊಬೈಲ್ ಅನ್ನು ಕಸಿಯಲು ಯತ್ನಿಸಿದ್ದಾರೆ. ಇದಕ್ಕೆ ಸಾಯಿಕಿರಣ್ ವಿರೋಧ ವ್ಯಕ್ತಪಡಿಸಿದಾಗ ಆತನ ಮೇಲೆ ನಾಲ್ಕು ಸುತ್ತು ಗುಂಡುಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಅಕ್ಕಪಕ್ಕದ ಮನೆಗಳಲ್ಲಿದ್ದ ಜನರು ಭಯಭೀತಗೊಂಡು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾಯಿಕಿರಣ್ ರನ್ನು ಆಸ್ಪತ್ರೆಗೆ ದಾಖಲು ಮಾಡಿದರಾದರೂ, ಮಾರ್ಗಮಧ್ಯೆಯೇ ಸಾಯಿಕಿರಣ್ ಅಸುನೀಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಫ್ಲೊರಿಡಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೈದರಾಬಾದ್ ಮೂಲದ ಪರಿಮಳ ನಗರದ ನಿವಾಸಿಯಾಗಿರುವ ಸಾಯಿಕಿರಣ್ ಕಿಸಾರದಲ್ಲಿರುವ ಗೀತಾಂಜಲಿ ಕಾಲೇಜಿನಲ್ಲಿ ಇತ್ತೀಚೆಗಷ್ಟೇ ಪದವಿ ಮುಗಿಸಿದ್ದರು. ಮಿಯಾಮಿಯಲ್ಲಿರುವ ಆಟ್ಲಾಂಟಿಸ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ವ್ಯಾಸಂಗ ಮಾಡುವ ಉದ್ದೇಶದಿಂದ ಕಳೆದ ಮೇ2ರಂದು ಫ್ಲೋರಿಡಾಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಪ್ರಸ್ತುತ ಸಾಯಿಕಿರಣ್ ಅಕಾಲಿಕ ಮರಣದಿಂದ ಅವರ ಕುಟುಂಬ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಅಲ್ಲದೆ ತೆಲಂಗಾಣ ಸರ್ಕಾರ ಮತ್ತು ಅಮೆರಿಕದಲ್ಲಿರುವ ತೆಲುಗು ಅಸೋಷಿಯೇಷನ್ ನೊಂದಿಗೆ ಕುಟುಂಬ ಸದಸ್ಯರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಸಾಯಿಕಿರಣ್ ಕುಟುಂಬಕ್ಕೆ ತುರ್ತು ವೀಸಾ ವೀಸಾ ನೀಡಲು ಕ್ರಮ ಕೈಗೊಂಡಿದ್ದೇವೆ ಎಂದು ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.