ಪುಣೆ: ಬಿಜೆಪಿ ಸದಸ್ಯ ಹಾಗೂ ಕಿರುತೆರೆ ಕಲಾವಿದ ಗಜೇಂದ್ರ ಚೌಹಾಣ್ ಅವರನ್ನು ಪ್ರತಿಷ್ಠಿತ ‘ಭಾರತೀಯ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆ’ಯ (ಎಫ್‌ಟಿಐಐ) ಅಧ್ಯಕ್ಷರಾಗಿ ನೇಮಕ ಮಾಡಿರುವುದನ್ನು ಸಂಸ್ಥೆಯ ವಿದ್ಯಾರ್ಥಿಗಳು ವಿರೋಧಿಸಿದ್ದು, ಸೋಮವಾರವೂ ಪ್ರತಿಭಟನೆ ಮುಂದುವರಿದೆ. ಕಳೆದ ಮೂರು ದಿನಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ನಾಲ್ಕನೇ ದಿನವಾದ ಇಂದು ಪ್ರತಿಭಟನೆಯ ಕಾವು ಹೆಚ್ಚಿದೆ.
ಗಜೇಂದ್ರ ಚೌಹಾಣ್ ಅವರು ‘ಮಹಾಭಾರತ’ ಧಾರಾವಾಹಿಯಲ್ಲಿ ಯುಧಿಷ್ಠಿರನ ಪಾತ್ರ ನಿರ್ವಹಿಸಿದ್ದರು. ಅಡೂರು ಗೋಪಾಲಕೃಷ್ಣನ್, ಶ್ಯಾಮ್ ಬೆನಗಲ್, ಗಿರೀಶ್ ಕಾರ್ನಾಡ್, ಯು. ಆರ್. ಅನಂತಮೂರ್ತಿ ಇತ್ಯಾದಿ ಗಣ್ಯರು ಈ ಸ್ಥಾನ ಅಲಂಕರಿಸಿದ್ದರು. ಗಜೇಂದ್ರ ಚೌಹಾಣ್ ಅವರು ಬಿಜೆಪಿ ಸದಸ್ಯರಾಗಿರುವುದರಿಂದ ಅವರನ್ನು ನೇಮಿಸಲಾಗಿದೆ. ಇದೊಂದು ರಾಜಕೀಯ ನೇಮಕಾತಿ, ಅಧ್ಯಕ್ಷರಾಗಿ ನಮಗೆ ಮೋದಿಯವರ ಕೈಗೊಂಬೆ ಬೇಡವೇ ಬೇಡ ಎಂದು ಎಫ್ ಟಿಐಐ ವಿದ್ಯಾರ್ಥಿಗಳು ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ
ಕಳೆದ ಶುಕ್ರವಾರ ಸುಮಾರು 150 ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು.
ಈ ನಡುವೆ ಗಜೇಂದ್ರ ಚೌಹಾಣ್, ತಮಗೆ ಈ ಉದ್ಯಮದಲ್ಲಿ 34 ವರುಷಗಳ ಅನುಭವವಿದೆ. ನಾನು ಈ ಸ್ಥಾನಕ್ಕೆ ಯೋಗ್ಯ ಎಂಬ ಕಾರಣದಿಂದಲೇ ನನಗೆ ಈ ಜವಾಬ್ದಾರಿ ವಹಿಸಿಕೊಡಲಾಗಿದೆ. ನನಗೇನೂ ಗೊತ್ತಿಲ್ಲ ಎಂಬ ಕಾರಣದಿಂದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವುದು ಸರಿಯಲ್ಲ.
ಈ ಬಗ್ಗೆ ನಾನು ವಿದ್ಯಾರ್ಥಿಗಳಿಗೆ ಪತ್ರ ಬರೆಯುತ್ತೇನೆ ಇಲ್ಲವೇ ಅವರೊಂದಿಗೆ ಮಾತುಕತೆ ನಡೆಸುತ್ತೇನೆ. 60-70 ರ ದಶಕದಲ್ಲಿ ನಮ್ಮಲ್ಲಿ ಪ್ರತಿಭಾನ್ವಿತ ನಟರು, ನಿರ್ದೇಶಕರು, ಸಂಭಾಷಣೆಕಾರರು, ಲೇಖಕರು ಇದ್ದು ಅವರೆಲ್ಲ ಎಫ್ ಟಿಐಐ ನಲ್ಲಿ ಕೆಲಸ ಮಾಡಿದ್ದಾರೆ. ಅದರ ನಂತರ ಇದು ಸ್ತಬ್ದವಾದಂತೆ ಇತ್ತು. ನಾನು ಇಲ್ಲಿಗೆ ಸೇರಿದ ನಂತರ ಈ ಬಗ್ಗೆ ವಿಶ್ಲೇಷಣೆ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವೆ ಎಂದು ಹೇಳಿದ್ದಾರೆ.
ಆದಾಗ್ಯೂ, ಚೌಹಾಣ್ ಅವರ ನೇಮಕದ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಿ ಎಂದು ಎಫ್ ಟಿ ಐಐ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಶಂಕರ್ ನಚಿಪತು ಒತ್ತಾಯಿಸಿದ್ದಾರೆ.