ಟರ್ಕಿ: ಇದನ್ನು ಟರ್ಕಿ ಸೈನಿಕರ ಅಸಹಾಯಕತೆ ಎನ್ನಬೇಕೋ? ಸಿರಿಯಾ ನಿರಾಶ್ರಿತ ದುರದೃಷ್ಟ ಎನ್ನಬೇಕೋ? ಒಟ್ಟಿನಲ್ಲಿ ಉಗ್ರರ ಸೆರೆ ಯಿಂದ ತಪ್ಪಿಸಿ ಗಡಿ ದಾಟಲು ಹವಣಿಸುತ್ತಿದ್ದ ಅವರನ್ನು ಐಸಿಸ್ ಉಗ್ರರು ಕಣ್ಣ ಮುಂದೆಯೇ ವಾಪಸ್ ಕರೆದೊಯ್ಯುತ್ತಿದ್ದರೂ ಅಲ್ಲೇ ಇದ್ದ ಟರ್ಕಿ ಸೈನಿಕರು ತಡೆಯುವುದಿರಲಿ, ಪ್ರಶ್ನಿಸುವ ಧೈರ್ಯವನ್ನೂ ಮಾಡಲಿಲ್ಲ. ನಮ್ಮನ್ನು ರಕ್ಷಿಸಿ ಎಂದು ಓಡೋಡಿ ಬಂದಿದ್ದ ನೂರಾರು ನಿರಾಶ್ರಿತರು ಮತ್ತೆ ಉಗ್ರರ ವಶಕ್ಕೆ ಹೋಗುತ್ತಿದ್ದರೂ ಸೈನಿಕರು ಏನೂ ಮಾಡದೆ ಕೈಚೆಲ್ಲಿದ್ದಾರೆ. ಐಸಿಸ್ ಉಗ್ರರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡರೆ ಸಾಕು ಎಂದು ಟರ್ಕಿಗೆ ಹೋಗಲು ಸಿದಟಛಿರಾಗಿ ಟಲ್ ಅಬ್ಯಾದ್ ಗಡಿ ಯಲ್ಲಿರುವ ಟರ್ಕಿ ಸೈನಿಕರ ಶಿಬಿರಕ್ಕೆ ಸಿರಿಯಾ ನಿರಾಶ್ರಿತರು ಬಂದಿದ್ದಾರೆ. ಕಳೆದ 10 ದಿನ ಗಳಿಂದ 13,000 ಮಂದಿ ಗಡಿ ದಾಟಿ ಪ್ರಾಣ ಉಳಿಸಿಕೊಂಡಿದ್ದರು. ಆದರೆ, ಈ ಬಾರಿ ಹೊರಟ ನಿರಾಶ್ರಿತರಿಗೆ ಅದೃಷ್ಟ ಕೈಕೊಟ್ಟಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಪಾರಾಗಲು ಯತ್ನಿಸುತ್ತಿರುವ ವಿಷಯ ತಿಳಿದ ಐಸಿಸ್ ಉಗ್ರರು ಅಲ್ಲಿಗೆ ದಿಡೀರ್ ಭೇಟಿ ನೀಡಿದ್ದು, ಎಲ್ಲರನ್ನೂ ಬಲವಂತವಾಗಿ ವಾಪಸ್ ಕರೆದೊಯ್ದಿದ್ದಾರೆ.