ದೇಶ

ಕಾಶ್ಮೀರದಲ್ಲಿ ನಡೆಯುತ್ತಿರುವ ನಿಗೂಢ ಹತ್ಯೆಗಳಿಗೆ ಲಷ್ಕರ್-ಎ-ಇಸ್ಲಾಂ ಸಂಘಟನೆ ಕಾರಣ

Srinivas Rao BV

ಕಾಶ್ಮೀರ: ಉತ್ತರ ಕಾಶ್ಮೀರ ಭಾಗದ ಸೋಪೊರೆ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ನಿಗೂಢ ಹತ್ಯೆಗಳಿಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯಿಂದ ಪ್ರತ್ಯೇಕಗೊಂಡಿರುವ ಲಷ್ಕರ್-ಎ-ಇಸ್ಲಾಂ ಸಂಘಟನೆಯೇ ಕಾರಣ ಎಂದು ಉತ್ತರ ಕಾಶ್ಮೀರದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಕಾಶ್ಮೀರದಲ್ಲಿ ಟೆಲಿಕಾಂ ಕಾರ್ಯಾಚರಣೆಗಳಿಗೆ ಉಂಟಾಗಿದ್ದ ಅಡ್ಡಿಗೂ ಇದೇ ಉಗ್ರ ಸಂಘಟನೆ ಕಾರಣ ಎಂದು ಪೊಲೀಸ್ ಅಧಿಕಾರಿ ಗರೀಬ್ ದಾಸ್ ಹೇಳಿದ್ದಾರೆ. ಲಷ್ಕರ್-ಎ-ಇಸ್ಲಾಂ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಿಂದ ಪ್ರತ್ಯೇಕಗೊಂಡಿರುವ ಗುಂಪಾಗಿದ್ದು ಇದರ ಸದಸ್ಯರು ಕಾಶ್ಮೀರದಲ್ಲಿ ಮಾಜಿ ಉಗ್ರರನ್ನು ನಿಗೂಢವಾಗಿ ಹತ್ಯೆ ಮಾಡುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ಮಹತ್ವದ ಸುಳಿವು ದೊರೆತಿದೆ. ಪ್ರತೀಕಾರ ತೀರಿಸಿಕೊಳ್ಳಲು ಲಷ್ಕರ್-ಎ-ಇಸ್ಲಾಂ ಸಂಘಟನೆ ಈ ರೀತಿಯ ದಾಳಿ ನಡೆಸುತ್ತಿದೆ.

ಟೆಲಿಕಾಂ ಕಾರ್ಯಾಚರಣೆ ಉಂಟಾಗಿದ್ದ ಅಡ್ಡಿಯನ್ನು ಪೊಲೀಸ್ ಅಧಿಕಾರಿಗಳು ಸರಿಪಡಿಸಿದ್ದು, ಮಾಜಿ ಉಗ್ರರನ್ನು ಹತ್ಯೆ ಮಾಡಿದವರನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ. ಜೂ.15 ರಂದು ಹರ್ಕತ್-ಉಲ್- ಮುಜಾಹಿದ್ದೀನ್ ಸಂಘಟನೆಯ ಮಾಜಿ ಉಗ್ರ ಐಜಾದ್ ಅಹಮದ್ ರೇಷಿ ಹತ್ಯೆ ಮೂಲಕ ಕಾಶ್ಮೀರದಲ್ಲಿ ನಿಗೂಢ ಹತ್ಯೆಗೊಳಗಾದ ಮಾಜಿ ಉಗ್ರರ ಸಂಖ್ಯೆ 4 ಕ್ಕೆ ಏರಿಕೆಯಾಗಿತ್ತು.

ನಿಗೂಢ ಹತ್ಯೆ ನಡೆಸುತ್ತಿರುವವರನ್ನು ಬಂಧಿಸಲು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಮಾಜಿ ಉಗ್ರರ ನಿಗೂಢ ಹತ್ಯೆ ಪ್ರಕರಣ ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ಒಗ್ಗೂಡಿಸಿದ್ದು. ಈ ಬಗ್ಗೆ ಪ್ರಮುಖ ಪ್ರತ್ಯೇಕತಾವಾದಿ ನಾಯಕರಾದ , ಸಯ್ಯದ್ ಅಲಿ ಗಿಲಾನಿ , ಉಮರ್ ಫಾರೂಕ್, ಯಾಸೀನ್ ಮಲ್ಲಿಕ್, ಶಾಬಿರ್ ಷಾ ಶ್ರೀನಗರದ ಜೈಮಾ ಮಸೀದಿಯಲ್ಲಿ ಸಭೆ ನಡೆಸಿದ್ದರು.

ಸಭೆಯಲ್ಲಿ ನಿಗೂಢ ಹತ್ಯೆಯನ್ನು ವಿರೋಧಿಸಿ ಜೂ.16 ರಂದು ಸೋಪೊರೆ ಜಿಲ್ಲೆಯ ಬಂದ್ ಗೆ ಕರೆ ನೀಡಲು ತೀರ್ಮಾನಿಸಲಾಗಿದೆ. ಇತ್ತೀಚೆಗಷ್ಟೇ ಪ್ರತ್ಯೇಕತಾವಾದಿ ನಾಯಕ  ಸಯ್ಯದ್ ಅಲಿ ಗಿಲಾನಿ ಆಪ್ತನನ್ನೂ ಸಹ ನಿಗೂಢವಾಗಿ ಹತ್ಯೆ ಮಾಡಲಾಗಿತ್ತು.

SCROLL FOR NEXT