ದೇಶ

ಪತ್ರಕರ್ತನ ಕೊಲೆ: ಸರ್ಕಾರದಿಂದ ತನಿಖಾ ಹಂತದ ವರದಿ ಕೇಳಿದ ಹೈಕೋರ್ಟ್

Srinivas Rao BV

ಲಖನೌ: ಉತ್ತರ ಪ್ರದೇಶದಲ್ಲಿ ನಡೆದಿದ್ದ ಪತ್ರಕರ್ತನ ಹತ್ಯೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ತನಿಖಾ ಸ್ಥಿತಿ ವರದಿಯನ್ನು ನೀದಬೇಕೆಂದು ಉತ್ತರ ಪ್ರದೇಶ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.   

ಉತ್ತರ ಪ್ರದೇಶ ಸಚಿವನ ಅಕ್ರಮಗಳ ಬಗ್ಗೆ ಬರೆದಿದ್ದ ಪತ್ರಕರ್ತ ಜಗೇಂದ್ರ ಸಿಂಗ್ ಹತ್ಯೆ ಪ್ರಕರಣವನ್ನು ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು 'ವಿ ದಿ ಪೀಪಲ್' ಎಂಬ ಎನ್.ಜಿ.ಒ, ಉತ್ತರ ಪ್ರದೇಶ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿ.ಐ.ಎಲ್) ಸಲ್ಲಿಸಿತ್ತು. ವಿಚಾರಣೆ ನಡೆಸಿರುವ ಹೈಕೋರ್ಟ್  ಜೂ.24 ರ ವೇಳೆಗೆ ಪತ್ರಕರ್ತನ ಹತ್ಯೆ ಪ್ರಕರಣದ ತನಿಖಾ ಹಂತದ ಬಗ್ಗೆ ವರದಿ ನೀಡಬೇಕೆಂದು ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿದೆ. ಅಂತೆಯೇ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂ.24 ಕ್ಕೆ ಮುಂದೂಡಿದೆ.

ಉತ್ತರ ಪ್ರದೇಶ ಹೈಕೋರ್ಟ್ ನ ರಜೆ ವಿಭಾಗದ ನ್ಯಾ.ಶ್ರೀನಾರಾಯಣ್ ಶುಕ್ಲ, ನ್ಯಾ.ಪ್ರತ್ಯೂಶ್ ಕುಮಾರ್ ಪೀಠ ಈ ಆದೇಶ ಹೊರಡಿಸಿದೆ. ಎನ್.ಜಿ.ಒ ಸಿಬಿಐ ತನಿಖೆಗೆ ಆಗ್ರಹಿಸಿರುವುದು ಮಾತ್ರವಲ್ಲದೇ ಮೃತ ಪತ್ರಕರ್ತನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವಂತೆ ಕೋರ್ಟ್ ಗೆ ಮನವಿ ಮಾಡಿದೆ. ಆದರೆ ಪಿ.ಐ.ಎಲ್ ಸಮರ್ಥನೀಯತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸರ್ಕಾರದ ಪರ ಬುಲ್ಬುಲ್  ಗೋಡಿಯಲ್, ಪ್ರಚಾರ ಪಡೆಯುವ ಉದ್ದೇಶದಿಂದ ಎನ್.ಜಿ.ಒ ಪಿಐಎಲ್ ದಾಖಲಿಸಿದೆ ಎಂದು ಆರೋಪಿಸಿದ್ದಾರೆ.

ಎನ್.ಜಿ.ಒ ಪಿಐಎಲ್ ದಾಖಲಿಸುವ ಮುನ್ನವೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್ ದಾಖಲಿಸಲಾಗಿದೆ. ಎನ್.ಜಿ.ಒ ಹೊರತಾಗಿ ಬೇರೆ ಯಾರೂ ಈ ಬಗ್ಗೆ ಪ್ರಶ್ನೆ ಮಾಡಲು ಮುಂದಾಗಿಲ್ಲ. ಆದ್ದರಿಂದ ಪಿಐಎಲ್ ನ್ನು ವಜಾಗೊಳಿಸಬೇಕು ಎಂದು ಕೋರ್ಟ್ ಗೆ ಮನವಿ ಮಾಡಿದ್ದಾರೆ. ಉತ್ತರ ಪ್ರದೇಶ ಸಚಿವ ರಾಮಮೂರ್ತಿ ವರ್ಮಾ ಅಕ್ರಮಗಳ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದಿದ್ದಕ್ಕಾಗಿ ಜಗೇಂದ್ರ ಸಿಂಗ್ ಎಂಬ ಪತ್ರಕರ್ತನನ್ನು ಸಚಿವರ ಬೆಂಬಲಿಗರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದರು.

SCROLL FOR NEXT