ದೇಶ

ಸ್ಮೃತಿ ಇರಾನಿ ಪದವಿ ಬಗ್ಗೆ ಪರಿಶೀಲನೆ ನಡೆಯಬೇಕು: ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಆಗ್ರಹ

Srinivas Rao BV

ಗಾಜಿಯಾಬಾದ್: ರಾಜಕಾರಣಿಗಳ ನಕಲಿ ಪದವಿ ಪ್ರಮಾಣಪತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಪ್ರಕ್ರಿಯೆ ನೀಡಿದ್ದು, ಆಮ್ ಆದ್ಮಿ ಪಕ್ಷದ ಜಿತೇಂದ್ರ  ಸಿಂಗ್ ತೋಮರ್ ನ ಪದವಿಯನ್ನು ಪರಿಶೀಲನೆ ನಡೆಸಿದಂತೆಯೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ವಿದ್ಯಾರ್ಹತೆಯ ಬಗ್ಗೆಯೂ ಪರಿಶೀಲನೆ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ರಾಜಕೀಯ ವಿಷಯಗಳ ಬಗ್ಗೆ ಮೋದಿ ಕುಟುಂಬ ಸದಸ್ಯರು ಈ ವರೆಗೂ ಪ್ರತಿಕ್ರಿಯೆ ನೀಡಿರಲಿಲ್ಲ. ಮೊದಲ ಬಾರಿಗೆ ಮೋದಿ ಸಹೋದರ ಪ್ರಹ್ಲಾದ್ ಮೋದಿ ನರೇಂದ್ರ ಮೋದಿ ಸರ್ಕಾರದ ರಾಜಕೀಯ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ವಿದ್ಯಾರ್ಹತೆ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದು ಆಗ್ರಹಿಸಿದ್ದಾರೆ.

ತೋಮರ್ ನ ನಕಲಿ ಪದವಿ ಪ್ರಕರಣ ಬಯಲಾಗುತ್ತಿದ್ದಂತೆಯೇ, ಸ್ಮೃತಿ ಇರಾನಿ ಪದವಿ, ವಿದ್ಯಾರ್ಹತೆ ಬಗ್ಗೆಯೂ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿತ್ತು. ಈಗ ಅಖಿಲ ಭಾರತ ನ್ಯಾಯಬೆಲೆ ಅಂಗಡಿ ಡೀಲರ್ಸ್ ಒಕ್ಕೂಟದ ಉಪಾಧ್ಯಕ್ಷ ಪ್ರಹ್ಲಾದ್ ಮೋದಿಯೂ ಸಹ ಸ್ಮೃತಿ ಇರಾನಿ ಪದವಿ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಸುಷ್ಮಾ ಸ್ವರಾಜ್ ಅವರು ಲಲಿತ್ ಮೋದಿಗೆ ನೀಡಿರುವ ನೆರವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಹ್ಲಾದ್ ಮೋದಿ, ಮಾನವೀಯ ಕಾರಣಗಳಿಂದ ಸುಷ್ಮಾ ಸ್ವರಾಜ್ ಲಲಿತ್ ಮೋದಿಗೆ ನೆರವು ನೀಡಿದ್ದಾರೆ. ಅದನ್ನು ದೊಡ್ಡ ವಿಷಯವನ್ನಾಗಿಸಬೇಕಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರ ಕಪ್ಪು ಹಣ ವಾಪಸ್ ತರಲು ಯತ್ನಿಸುತ್ತಿದೆ, ಆದರೆ ವಿದೇಶದಲ್ಲಿರುವುದಕ್ಕಿಂತಲೂ ಭಾರತದಲ್ಲಿ ಕಪ್ಪು ಹಣ  ಹೆಚ್ಚಿದೆ ಎಂದು ಪ್ರಹ್ಲಾದ್ ಮೋದಿ ಹೇಳಿದ್ದಾರೆ.

SCROLL FOR NEXT