ಬೀಜಿಂಗ್: ಅಪಘಾತದಲ್ಲಿ ಗಾಯಗೊಂಡಿದ್ದ "ಕಲಿಯುಗದ ಕೃಷ್ಣ"ನೊಬ್ಬ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆತನ ನೋಡಲು ಬಂದ ಬರೋಬ್ಬರಿ 17 ಮಂದಿ ಪ್ರೇಯಸಿರಿಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾನೆ.
ಅಪಘಾತವೊಂದರಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ದಾಖಲಿಸಿ ಆತನ ಸಂಬಂಧಿಕರಿಗೆ ಆಸ್ಪತ್ರೆಗೆ ಬರುವಂತೆ ಕರೆ ಮಾಡಿದಾಗ ಬರೊಬ್ಬರಿ 17 ಜನ ಯುವತಿಯರು ಬಂದು ಆತನನ್ನು ಮಲಗಿಸಿದ್ದ ಬೆಡ್ ಸುತ್ತ ಬಂದು ನಿಂತು ಆತನ ರಹಸ್ಯ ಬಯಲಾದ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ಯುಆನ್ ಎಂಬ ವ್ಯಕ್ತಿಯೊಬ್ಬ ಅಪಘಾತದಿಂದ ಗಾಯಗೊಂಡಿದ್ದ. ತಕ್ಷಣಕ್ಕೆ ಆತನನ್ನು ಆಸ್ಪತ್ರೆಗೆ ಸೇರಿಸಿದ ವ್ಯಕ್ತಿ ಆತನ ಮೊಬೈಲ್ ನಲ್ಲಿರುವ ಕೆಲ ನಂಬರ್ ಗಳಿಗೆ ಕಾಲ್ ಮಾಡಿದ್ದಾರೆ. ಆದರೆ ಆ ವ್ಯಕ್ತಿಗೇನು ಗೊತ್ತು ತಾನು ಕರೆ ಮಾಡುತ್ತಿರುವುದು ಈತನ ಪ್ರೇಯಸಿರಿಗೆ ಎಂದು. ಎಷ್ಟೆಂದರೂ ಬಾಯ್ ಫ್ರೆಂಡ್ ತಾನೇ. ಪ್ರಿಯಕರನಿಗೆ ಅಪಘಾತವಾದ ಸುದ್ದಿ ಕೇಳಿ ಆತಂಕಗೊಂಡ ಹುಡುಗಿಯರು ಆಸ್ಪತ್ರೆಗೆ ಧಾವಿಸಿದ್ದಾರೆ.
ಆಗ ಈ ಕಲಿಯುಗದ ಕೃಷ್ಣನ ರಹಸ್ಯ ಬಯಲಾಗಿದ್ದು, ಒಬ್ಬರಿಗೆ ತಿಳಿಯದಂತೆ ಮತ್ತೊಬ್ಬರೊಂದಿಗೆ ಸಂಬಂಧವಿರಿಸಿಕೊಂಡಿದ್ದ. ಈ 17 ಜನರಲ್ಲಿ ಒಬ್ಬರಿಗೂ ಆತ ತಮ್ಮನ್ನು ಬಿಟ್ಟು ಬೇರೆ ಹುಡುಗಿಯ ಜತೆ ಅಫೇರ್ ಹೊಂದಿರುವುದು ಗೊತ್ತಿರಲಿಲ್ಲವಂತೆ. ಕೆಲ ತಿಂಗಳುಗಳಿಂದ ಪ್ರೇಮ ಸಂಬಂಧ ಹೊಂದಿದವರು ಸೇರಿದಂತೆ 9 ವರ್ಷಗಳಿಂದ ಪ್ರೀತಿಸುತ್ತಿದ್ದವರು ಸಹ ಆ ಗುಂಪಿನಲ್ಲಿದ್ದರು ಎನ್ನಲಾಗಿದೆ. ಅದರಲ್ಲಿ ಒಬ್ಬಾಕೆಯಂತೂ ಆತ ಕರುಣಿಸಿದ ಮಗುವನ್ನು ಎತ್ತಿಕೊಂಡೇ ಆಸ್ಪತ್ರೆಗೆ ಬಂದಿದ್ದಳು.
ತನ್ನ ಎಲ್ಲಾ ಪ್ರೇಯಸಿಯರನ್ನು ಒಟ್ಟಿಗೆ ಕಂಡ ಯುಆನ್ ಗೆ ಆಘಾತ ಬಡಿದಂತಾಗಿದೆ. ಇನ್ನು ಆತನ ಮೇಲೆ ನಂಬಿಕೆ ಇಟ್ಟ ಹುಡುಗಿಯರಂತೂ ಆಕ್ರೋಶ ಆಸ್ಪತ್ರೆಯಲ್ಲೇ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಅಪಘಾತವಾಗಿದ್ದು ಒಳ್ಳೆಯದೇ ಆಯಿತು ಎಂದು ಶಪಿಸಿ ಅಲ್ಲಿಂದ ಹೊರ ಬಂದರಂತೆ. ಅಷ್ಟೇ ಅಲ್ಲ, ಅವರೆಲ್ಲರೂ ಈಗ ಒಂದಾಗಿ ಸೇರಿ ಸಾಮಾಜಿಕ ಜಾಲ ತಾಣದಲ್ಲಿ ತಮ್ಮದೇ ಆದ ಒಂದು ಗ್ರೂಪ್ ಮಾಡಿಕೊಂಡು ಆತನಿಂದ ಯಾವ ಯಾವ ರೀತಿಯಲ್ಲಿ ಅನ್ಯಾಯವಾಗಿದೆ ಎಂಬ ಬಗ್ಗೆ ಚರ್ಚಿಸುತ್ತಿದ್ದಾರಂತೆ.
ಸಾಮಾಜಿಕ ಜಾಲ ತಾಣದಲ್ಲಿ ಈ ವಿಲಕ್ಷಣ ಕಥೆ ವೈರಲ್ ಆಗಿ ಹರಿದಾಡುತ್ತಿದ್ದು, ಕೆಲವರು ಆತನ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲ ಯುವಕರಂತು ಏಕಕಾಲದಲ್ಲಿ ಆತ ಒಂದೇ ಸಲ 17 ಪ್ರೇಯಸಿಯರನ್ನು ಸಂಭಾಳಿಸಿದ್ದು ಹೇಗೆ ಎಂದು ತಲೆ ಕೆಡಿಸಿಕೊಂಡಿದ್ದಾರೆ.