ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಕೇವಲ ಕಾರ್ಯಕ್ರಮ ಉದ್ಘಾಟಿಸಿ, ಭಾಷಣ ಮಾಡಿ ತೆರಳುತ್ತಾರೆಂದು ಭಾವಿಸಲಾಗಿತ್ತು.
ಆದರೆ, ರಾಜಪಥದಲ್ಲಿ ನೆರೆದಿದ್ದ 35 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಪ್ರಧಾನಿ ಮೋದಿ ಯೋಗಾಸನವನ್ನು ಮಾಡಿ ಅಚ್ಚರಿ ಮೂಡಿಸಿದರು.ಯೋಗ ಗುರು ಬಾಬಾ ರಾಮದೇವ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ವಿವಿಧ ಧಾರ್ವಿುಕ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಯೋಗಪಥವಾಗಿ ಮಾರ್ಪಟ್ಟಿದ್ದ ನವದೆಹಲಿಯ ರಾಜಪಥದಲ್ಲಿ ಸುಮಾರು 40 ಸಾವಿರ ಜನರು ಯೋಗಾಭ್ಯಾಸ ಮಾಡಿದ್ದು ಕಾರ್ಯಕ್ರಮದ ಹೈಲೈಟ್ ಆಗಿತ್ತು. ಅಲ್ಲದೆ ಇದೊಂದು ವಿಶ್ವದಾಖಲೆಯಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಆಯೋಜಕರು ಕಾರ್ಯಕ್ರಮವನ್ನು ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಳಿಸುವಂತೆ ಮನವಿ ಮಾಡಿಕೊಂಡು ಪತ್ರ ಬರೆದಿದ್ದಾರೆ. 2005ರ ನವೆಂಬರ್ 19ರಂದು ಗ್ವಾಲಿಯರ್ನಲ್ಲಿ ವಿವೇಕಾನಂದ ಕೇಂದ್ರ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 29,973 ಜನರು ಏಕಕಾಲಕ್ಕೆ ಯೋಗಾಸನಗಳನ್ನು ಮಾಡಿದ್ದು ಇದುವರೆಗಿನ ಗಿನ್ನೆಸ್ ದಾಖಲೆಯಾಗಿದೆ.
192 ದೇಶ, 250ಕ್ಕೂ ಹೆಚ್ಚು ನಗರದ ಜನತೆ ಭಾನುವಾರದ ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ದೆಹಲಿಯ ರಾಜಪಥ್ ವೊಂದರಲ್ಲೇ ಸುಮಾರು 40 ಸಾವಿರ ಜನ ಭಾಗವಹಿಸಿದ್ದಾರೆ. ಬೆಳಗ್ಗೆ 6.45ಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಜಪಥಕ್ಕೆ ಆಗಮಿಸಿ ಭಾಷಣ ಮಾಡಿದರು. ಅಲ್ಲದೆ ತಮ್ಮ ಸಹೋದ್ಯೋಗಿ ಮಿತ್ರರೊಂದಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.
ಸಮಸ್ತ ಭಾರತೀಯರ ಒತ್ತಾಸೆ ಮೇರೆಗೆ ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ ಪರಿಣಾಮವಾಗಿ ಘೋಷಣೆಯಾದ "ಅಂತಾರಾಷ್ಟ್ರೀಯ ಯೋಗ ದಿನ'ಕ್ಕೆ ಇಂದು ಚೊಚ್ಚಲ ಆಚರಣೆಯ ಸಂಭ್ರಮವಾಗಿದೆ. ಭಾರತವೂ ಸೇರಿದಂತೆ ವಿಶ್ವದ ಮೂಲೆಮೂಲೆಯಲ್ಲಿ ಭಾನುವಾರ ಇಡೀ ದಿನ ಯೋಗ ದಿನ ಆಚರಿಸಲಾಗುತ್ತಿದೆ. ಸುಮಾರು 177 ದೇಶಗಳಲ್ಲಿ ಯೋಗ ದಿನಾಚರಣೆ ಮಾಡಲಾಗುತ್ತಿದ್ದು, ಇವುಗಳ ಪೈಕಿ 49 ಮುಸ್ಲಿಂ ರಾಷ್ಟ್ರಗಳಲ್ಲಿಯೂ ಕೂಡ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.