ನವದೆಹಲಿ: ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ ಅವರ ಅನುಪಸ್ಥಿತಿಯನ್ನು ಪ್ರಶ್ನಿಸಿದ್ದು, ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ 'ತಾರತಮ್ಯ' ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಯೋಗ ದಿನಾಚರಣೆಯಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ವಕ್ತಾರ ಆರ್‌ಪಿಎನ್ ಸಿಂಗ್ ಅವರು, ಬಳಿಕ, ಶಿಷ್ಟಾಚಾರದ ಹಿನ್ನೆಲೆಯಲ್ಲಿ ಅವರಿಗೆ ಆಹ್ವಾನ ನೀಡಿರಲಿಲ್ಲ ಎಂದು ಹೇಳಿದ್ದಾರೆ.
ಕೇಂದ್ರದ ಆಯುಶ್ ಇಲಾಖೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಗಳಾಗಿದ್ದರು. ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಪ್ರಧಾನಿಗಿಂತ ಮೇಲೂ. ಶಿಷ್ಟಾಚಾರದ ಪ್ರಕಾರ ಪ್ರಧಾನಿ ಮುಖ್ಯ ಅತಿಥಿಯಾಗಿರುವ ಕಾರ್ಯಕ್ರಮಕ್ಕೆ ರಾಷ್ಟ್ರಪತಿ, ಉಪರಾಷ್ಟ್ರಪತಿಗಳಿಗೆ ಆಹ್ವಾನ ನೀಡಲು ಬರುವುದಿಲ್ಲ ಎಂದು ಆಯುಶ್ ರಾಜ್ಯ ಸಚಿವ ಶ್ರೀಪಾದ್ ನಾಯಕ ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ಮಾಧವ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, 'ಅವರು ಆಕಸ್ಮಾತ್ ತಪ್ಪಾಗಿ ಹೇಳಿದ್ದಾರೆ. ಅಲ್ಲದೆ ಮಾಧವ್ ಈಗಾಗಲೇ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ' ಎಂದು ಹೇಳಿದ್ದಾರೆ. ಆದರೆ ಸರ್ಕಾರದ ಈ ಸ್ಪಷ್ಟನೇ ಕಾಂಗ್ರೆಸ್‌ಗೆ ತೃಪ್ತಿ ತಂದಿಲ್ಲ. ಬಿಜೆಪಿ ತಾರತಮ್ಯ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ. ಅಲ್ಲದೆ ಮಾಧವ್ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.
ಇನ್ನು ವಿವಾದದ ಬಗ್ಗೆ ಸ್ಪಷ್ಟನೇ ನೀಡಿರು ಉಪ ರಾಷ್ಟ್ರಪತಿಗಳ ಕಚೇರಿ, ಸಚಿವರ ಹೇಳಿಕೆ ಸರಿಯಾಗಿದೆ ಎಂದಿದೆ.
ಹಮಿದ್ ಅನ್ಸಾರಿ ಅವರ ಅನುಪಸ್ಥಿತಿಯನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದ ರಾಮ್ ಮಾಧವ್, ಆ ನಂತರ ಅದನ್ನು ಡಿಲೀಟ್ ಮಾಡಿ ಉಪರಾಷ್ಟ್ರಪತಿಗಳ ಆರೋಗ್ಯ ಸರಿಯಾಗಿಲ್ಲದ ಕಾರಣ ಅವರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿಲ್ಲ ಎಂದು ತಿಳಿದುಬಂದಿದೆ. ಅವರ ಅನುಪಸ್ಥಿತಿಯನ್ನು ಪ್ರಶ್ನಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದರು.
ಆದರೆ ಹಮಿದ್ ಅನ್ಸಾರಿ ಅವರು ಆರೋಗ್ಯದ ಕಾರಣದಿಂದ ಯೋಗ ಕಾರ್ಯಕ್ರಮಕ್ಕೆ ಗೈರುಹಾಜರಿಯಾಗಿಲ್ಲ, ಹಾಜರಾಗುವುದಕ್ಕೆ ಅವರಿಗೆ ಆಹ್ವಾನವೇ ಬಂದಿಲ್ಲ ಎಂದು ಉಪರಾಷ್ಟ್ರಪತಿಗಳ ಕಚೇರಿ ಸ್ಪಷ್ಟಪಡಿಸಿದೆ.