ದೇಶ

ಲಲಿತ್ ಮೋದಿ ಕರೆತರಲು ಯುಪಿಎ ಸರ್ಕಾರ ಯಾವತ್ತೂ ಇಂಟರ್‌ಪೋಲ್ ನೆರವು ಕೇಳಿಲ್ಲ: ವರದಿ

Lingaraj Badiger

ನವದೆಹಲಿ: ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿಗೆ ಸಹಾಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಈಗ ತಾನೇ ಇಕ್ಕಟ್ಟಿಗೆ ಸಿಲುಕಿದೆ.

ಮಾಧ್ಯಮ ವರದಿಗಳ ಪ್ರಕಾರ, ಲಲಿತ್ ಮೋದಿಯನ್ನು ಭಾರತಕ್ಕೆ ಕರೆತರಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇಂಟರ್‌ಪೋಲ್ ನೆರವು ಪಡೆಯುವಲ್ಲಿ ವಿಫಲವಾಗಿದೆ.

2010ರಲ್ಲೇ ಲಲಿತ್ ಮೋದಿ ವಿರುದ್ಧ ಐಪಿಎಲ್ ಹಗರಣ ಸೇರಿದಂತೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ ಮೋದಿ ಪಾಸ್‌ಪೋರ್ಟ್ ಸಹ ರದ್ದು ಮಾಡಲಾಗಿತ್ತು ಮತ್ತು ಆತನ ವಿರುದ್ಧ ಬ್ಲೂ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೋದಿಯನ್ನು ಭಾರತಕ್ಕೆ ಕರೆತರಲು ಯಾವತ್ತೂ ಇಂಟರ್‌ಪೋಲ್ ನೆರವು ಕೇಳಲಿಲ್ಲ.

ಭಾರತ ಸರ್ಕಾರ ಲಲಿತ್ ಮೋದಿ ವಿರುದ್ಧ ಯಾವುದೇ ನೋಟಿಸ್ ಜಾರಿ ಮಾಡುವಂತೆ ಯಾವತ್ತೂ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆಯನ್ನು ಕೇಳಲಿಲ್ಲ ಎಂದು ಇಂಟರ್‌ಪೋಲ್ ಮಾಜಿ ಮುಖ್ಯಸ್ಥ ರೊನಾಲ್ಡ್ ಕೆ. ನೋಬಲ್ ಹೇಳಿರುವುದಾಗಿ ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಯುಪಿಎ ಸರ್ಕಾರ ಇಂಟರ್‌ಪೋಲ್‌ಗೆ ಮನವಿ ಮಾಡಬೇಕಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT