ನವದೆಹಲಿ: ಕರ್ನಾಟಕದ ಮೌನೇಶ್ ಬಡಿಗೇರ್ ಪ್ರಸಕ್ತ ಸಾಲಿನ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಬಡಿಗೇರ್ ಅವರ ಸಣ್ಣ ಕಥೆಗಳ ಸಂಕಲನಕ್ಕೆ ಈ ಪ್ರಶಸ್ತಿ ಸಂದಿದೆ. ಕೊಂಕಣಿ ಭಾಷೆಯ ಕವನ ಸಂಕಲನಕ್ಕೆ ಶ್ರೀನಿವಾಸ್ ನಾಯಕ್ ಸಹ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಸ್ಮರಣ ಫಲಕ ಮತ್ತು ರು.50 ಸಾವಿರ ನಗದು ಒಳಗೊಂಡಿದೆ.
ಅಕಾಡೆಮಿ ಬುಧವಾರ 23 ಭಾಷೆಗಳಲ್ಲಿ ವಾರ್ಷಿಕ ಯುವ ಪುರಸ್ಕಾರ ಪ್ರಶಸ್ತಿಗಳನ್ನು ಪ್ರಕಟಿಸಿದೆ. 13 ಕವನ ಸಂಕಲನಗಳು, ಮೂರು ಕಾದಂಬರಿ, ಆರು ಸಣ್ಣ ಕಥೆಗಳ ಸಂಕಲನ ಮತ್ತು ಒಂದು ವಿಮರ್ಶಾ ಪುಸ್ತಕವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ವರ್ಷ ಕಾಶ್ಮೀರಿ ಭಾಷೆಗೆ ಪ್ರಶಸ್ತಿ ನೀಡಿಲ್ಲ ಎಂದು ಅಕಾಡೆಮಿಯ ಅಧಿಕೃತ ಮೂಲಗಳು ಹೇಳಿವೆ. 23 ಭಾಷೆಗಳ ಸದಸ್ಯರಿಂದ ಆಯ್ಕೆ ಮಂಡಳಿ ಈ ಶಿಫಾರಸುಗಳನ್ನು ಮಾಡಿತ್ತು.
ಅಕಾಡೆಮಿ ಅಧ್ಯಕ್ಷ ವಿಶ್ವನಾಥ್ ಪ್ರಸಾದ್ ತಿವಾರಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕಾರ್ಯಕಾರಿ ಮಂಡಳಿ ಶಿಫಾರಸುಗಳನ್ನು ಅನುಮೋದಿಸಿತು. ಇದೇ ವೇಳೆ, ಈ ವರ್ಷದ ಬಾಲ ಸಾಹಿತ್ಯ ಪುರಸ್ಕಾರ ಕೂಡ ಘೋಷಣೆಯಾಗಿದ್ದು ಐವರು ಕಾದಂಬರಿಕಾರರು, ನಾಲ್ಕು ಸಣ್ಣಕತೆಗಾರರು, ಮೂವರು ಕವನ ಬರಹಗಾರರಿಗೆ ಸಂದಿದೆ. ಪ್ರಶಸ್ತಿ 50 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.
ಮಕ್ಕಳ ಸಾಹಿತ್ಯಕ್ಕೆ ನೀಡಿದ ಸಮಗ್ರ ಕೊಡುಗೆಗಾಗಿ ಕರ್ನಾಟಕದ ಟಿ.ಎಸ್ ನಾಗರಾಜ ಶೆಟ್ಟಿಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಯಾವಾಗ ನಡೆಯಲಿದೆ ಎಂಬುದನ್ನು ಅಕಾಡೆಮಿ ಇನ್ನೂ ಪ್ರಕಟಿಸಿಲ್ಲ.