ನವದೆಹಲಿ: ಅತೀ ಹೆಚ್ಚು ಭದ್ರತೆಯಿಂದ ಕೂಡಿರುವ ತಿಹಾರ್ ಜೈಲಿನಿಂದ ಇಬ್ಬರು ಖೈದಿಗಳು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದು, ಇದರಲ್ಲಿ ಒಬ್ಬ ಸೆರೆ ಸಿಕ್ಕಿದ್ದಾನೆ. ಇನ್ನೊಬ್ಬ ಖೈದಿ ಓಡಿ ಪರಾರಿಯಾಗಿದ್ದಾನೆ. ಜೈಲಿನೊಳಗೆ ಸುರಂಗ ನಿರ್ಮಿಸಿ ಅದರ ಮೂಲಕ ಖೈದಿಗಳು ಶನಿವಾರ ರಾತ್ರಿ ಪರಾರಿಯಾಗಲು ಯತ್ನಿಸಿದ್ದರು.
ಜೈಲಿನಲ್ಲಿರುವ 7 ನೇ ನಂಬರ್ ಸೆಲ್ ಬಳಿ ಇರುವ ಗೋಡೆ ಹಾರಿ, ಅದರ ನಂತರ 8 ನೇ ನಂಬರ್ ಸೆಲ್ ಬಳಿ ಸುರಂಗ ನಿರ್ಮಿಸಿ ಅದರ ಮೂಲಕ ಖೈದಿಗಳು ಜೈಲಿನಿಂದ ತಪ್ಪಿಸುವ ಪ್ರಯತ್ನ ಮಾಡಿದ್ದರು.
ಇಬ್ಬರಲ್ಲಿ ಒಬ್ಬ ಖೈದಿ ತಪ್ಪಿಸಿಕೊಳ್ಳುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಇನ್ನೊಬ್ಬ ಓಡಿ ತಪ್ಪಿಸಿಕೊಂಡು ಹೋಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಖೈದಿ ಪರಾರಿಯಾಗಿರುವ ಸಂಗತಿ ಭಾನುವಾರ ಬೆಳಗ್ಗೆ ಪೊಲೀಸರ ಗಮನಕ್ಕೆ ಬಂದಿತ್ತು. ಆಮೇಲೆ ತನಿಖೆ ನಡೆಸಿದಾಗ ಜೈಲಿನ ಗೋಡೆಯಲ್ಲಿ ಸುರಂಗ ತೋಡಿರುವ ಬಗ್ಗೆ ತಿಳಿದು ಬಂತು.
ಆದಾಗ್ಯೂ, ಖೈದಿಗಳಿಗೆ ಸುರಂಗ ತೋಡಲು ವಸ್ತುಗಳು ಹೇಗೆ ಸಿಕ್ಕಿದವು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಏಷ್ಯಾದಲ್ಲೇ ಅತೀ ಹೆಚ್ಚು ಭದ್ರತೆಯಿಂದ ಕೂಡಿದ ತಿಹಾರ್ ಜೈಲಿನಲ್ಲಿ ಈ ಘಟನೆ ಸಂಭವಿಸಿರುವುದರ ಬಗ್ಗೆ ತನಿಖೆ ಮುಂದುವರಿದಿದೆ.