ಉತ್ತರ ಪ್ರದೇಶ: ಇಲ್ಲಿನ ಪೊಲೀಸರಿಗೆ ಈಗ ಕೋಳಿ ಹಿಡಿಯುವ ಕಾಯಕ. ಇದೇನಪ್ಪಾ ಕಳ್ಳರನ್ನು ಹಿಡಿಯುವ ಪೊಲೀಸರು ಕೋಳಿಗಳನ್ನು ಹಿಡಿಯುತ್ತಾರೆ ಎಂದೆನಿಸಿದರೆ, ಸದ್ಯಕ್ಕಂತೂ ಹೌದು. ಏಕೆಂದರೆ, ಕಳ್ಳರು ಕದ್ದಿರುವ ಕೋಳಿಯನ್ನು ಹುಡುಕಿ ಕೊಡುವಂತೆ ಪೊಲೀಸರಿಗೆ ಆದೇಶಿಸಲಾಗಿದೆ.
ಹಿಂದೊಮ್ಮೆ ಸಚಿವ ಅಜಂ ಖಾನ್ ಅವರ ಕಳುವಾದ ಎಮ್ಮೆಗಳನ್ನು ಪತ್ತೆಹಚ್ಚಿ ಮೆಚ್ಚುಗೆ ಗಳಿಸಿಕೊಂಡಿದ್ದ ಪೊಲೀಸರಿಗೀಗ ಕೋಳಿ ಹಿಡಿಯುವ ಕೆಲಸವಾಗಿಬಿಟ್ಟಿದೆ. ಕಳುವಾದ ಕೋಳಿಗಳನ್ನು ತಕ್ಷಣ ಪತ್ತೆ ಹಚ್ಚುವಂತೆ ಉತ್ತರಪ್ರದೇಶದ ರಾಜ್ಯಪಾಲರೇ ಆದೇಶ ನೀಡಿದ್ದಾರೆ. ರಾಜ್ಯಪಾಲ ರಾಮ್ ನಾಯಕ್ ನೀಡಿರುವ ಆದೇಶ ಪೊಲೀಸರು ಕಿರಿಕಿರಿ ಉಂಟುಮಾಡಿದಂತಾಗಿದೆ. ಕೋಳಿ ಪತ್ತೆ ಹಚ್ಚುವುದರ ಜೊತೆಗೆ ಕೋಳಿ ಕಳ್ಳರನ್ನು ಹಿಡಿಯಬೇಕು ಎಂದು ರಾಜ್ಯಪಾಲರು ಸ್ಪಷ್ಟವಾಗಿ ಸೂಚಿಸಿದ್ದಾರೆ.
ರಾಂಪುರ ನಿವಾಸಿಯಾದ ಫರ್ ಉಲ್ಲಾ ಖಾನ್ ಎಂಬುವರ ಮನೆಯಿಂದ ಕಳೆದ ಮಾರ್ಚ್‌ನಲ್ಲಿ ನೂರಾರು ಕೋಳಿಗಳನ್ನುಅಪಹರಿಸಲಾಗಿತ್ತು. ಖಾನ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಪೊಲೀಸರ ನಿದ್ರೆಗೆ ಬೇಸತ್ತ ಖಾನ್ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಅದರ ಪರಿಣಾಮವೇ ಗವರ್ನರ್ ಕೋಳಿ ಹುಡುಕಾಟ ಆದೇಶ.