ದೇಶ

ಉಲ್ಕಾಪಾತ ಧೃಢೀಕರಿಸಿದ ವಿಜ್ಞಾನಿಗಳು

ಕೊಚ್ಚಿ: ಕಾಸರುಗೋಡು ಸೇರಿದಂತೆ ಕೇರಳದ ಹಲವೆಡೆ ಬಾನಂಗಳದಲ್ಲಿ ಬೆಂಕಿ ಚೆಂಡು ಪ್ರತ್ಯಕ್ಷಗೊಂಡು ವಿಸ್ಮಯ ಹಾಗೂ ಅಚ್ಚರಿ ಮೂಡಿಸಿದ್ದ ಘಟನೆಯನ್ನು ವಿಜ್ಞಾನಿಗಳು ಉಲ್ಕಾಪಾತವೆಂದು ದೃಢೀಕರಿಸಿದ್ದಾರೆ.

ಕೇರಳದಲ್ಲಿ ಶುಕ್ರವಾರ ರಾತ್ರಿ ಕರಿಮಲ್ಲೂರು ಗ್ರಾಮದ ಜನತೆಗೆ ಆಗಸದಲ್ಲಿ ಬೃಹತ್ ಬೆಂಕಿಯುಂಡೆಯೊಂದು ಕಂಡುಬಂದಿತ್ತು. ಇದೇ ರೀತಿಯ ದೃಶ್ಯ ಅಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಗೋಚರವಾಗಿತ್ತು. ಈ ಬೆಂಕಿಯುಂಡೆಗಳು ಹಾದುಹೊಗುವಾಗ ಭಾರಿ ಶಬ್ಧ ಹಾಗೂ ಭೂಕಂಪದ ಅನುಭವವಾಗುವಂತೆ ಅಲ್ಲಿನ ಜನರಿಗೆ ಭಾಸವಾಗಿತ್ತಲ್ಲದೆ ಜನರಲ್ಲಿ ಆತಂಕವನ್ನುಂಟು ಮಾಡಿತ್ತು.

ಕೆಲವು ಗಂಟೆಗಳ ನಂತರ ಈ ಶಬ್ಧ ಕಂಡುಬಂದಿರಲಿಲ್ಲ. ಶನಿವಾರ ಬೆಳಿಗ್ಗೆ ಎರ್ನಾಕುಲಂ ಜಿಲ್ಲೆಯ ಎರಡು ಪ್ರದೇಶಗಳಲ್ಲಿ ದೊಡ್ಡದಾದ ಗುಂಡಿಗಳು ಬಿದ್ದಿದ್ದವು. ರಾತ್ರಿ ಕಂಡ ಬೆಂಕಿ ಉಂಡೆಗಳೇ ಭೂಮಿಗೆ ಬಿದ್ದಿರುವುದರಿಂದ ಗುಂಡಿಯಾಗಿದೆ ಎಂದು ಅಲ್ಲಿನ ಸ್ಥಳೀಯರ ವಾದವಾಗಿತ್ತು. ಘಟನೆ ತಿಳಿದ ಸ್ಥಳೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳು ಉಲ್ಕಾಪಾತದಿಂದ ಗುಂಡಿಯಾಗಿದೆ ಎಂದು ಅಂದಾಜು ಮಾಡಿದ್ದರು. ಸ್ಥಳದಲ್ಲಿ ಸಿಕ್ಕ ಉಲ್ಕಾಪಾತದ ಎಲ್ಲಾ ಸ್ಯಾಂಪಲ್‌ಗಳನ್ನು ಭಾರತೀಯ ಭೂಗರ್ಭ ಇಲಾಖೆಗೆ ಕಳುಹಿಸಿದ್ದರು.

ಧರಗೆ ಬಿದ್ದ ಉಲ್ಕಾಪಾತದ ಕೆಲವು ಸ್ಯಾಂಪಲ್‌ಗಳನ್ನು ಪರಿಶೀಲಿಸಿರುವ ಭಾರತೀಯ ಭೂಗರ್ಭ ಇಲಾಖೆಯ ವಿಜ್ಞಾನಿಗಳು ಬಾನಂಗಳದಿಂದ ಧರೆಗೆ ಬಿದ್ದಿರುವುದು ಆಗಸದಲ್ಲಿನ ಉಲ್ಕೆಗಳೇ ಎಂದು ದೃಢೀಕರಿಸಿದ್ದಾರೆ.

SCROLL FOR NEXT