ನವದೆಹಲಿ: ಸತತ ಸೋಲಿನಿಂದ ಕಂಗೆಟ್ಟಿರುವ ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಮತ್ತೆ ತಲೆ ಎತ್ತಲು ತಯಾರಿ ನಡೆಸಿದೆ. ಇದಕ್ಕಾಗಿ `ಬಡವರ ಪರ' ಮುಖ ಹೊತ್ತು ಭವಿಷ್ಯದಲ್ಲಿ ಬಿಜೆಪಿ ವಿರುದ್ಧ ಸೆಣೆಸಲು ನಿರ್ಧರಿಸಿದೆ.
12 ದಿನಗಳ ಧ್ಯಾನ ಮುಗಿಸಿ ಕಾಂಗ್ರೆಸ್ ಯುವರಾಜ ಹಿಂದಿರುಗಿದೊಡನೆ ಏಪ್ರಿಲ್ ನಲ್ಲಿ ನಡೆಯುವ ಎಐಸಿಸಿ ಅಧಿವೇಶನದಲ್ಲಿ ಈ ಹೊಸ ನಿಲುವು ಪ್ರಕಟವಾಗುವ ಸಾಧ್ಯತೆ ಇದೆ. ಸದ್ಯ ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಪರ ಎಂಬ ಬ್ರಾಂಡ್ ಕಾಂಗ್ರೆಸ್‍ಗಿದೆ. ಅದರಿಂದ ಹೊರಬಂದು `ಬಡವರ ಕಾಂಗ್ರೆಸ್' ಎನ್ನುವ ಇಮೇಜ್ ಬೆಳೆಸಿಕೊಳ್ಳಲು ಪಕ್ಷ ಹೊರಟಿದೆ.
1971ರ ಚುನಾವಣೆಯಲ್ಲಿ ಇಂದಿರಾಗಾಂಧಿ ವಿರೋಧ ಪಕ್ಷಗಳನ್ನು ಚುನಾವಣೆಯಲ್ಲಿ ಹಣಿಯಲು ಬಳಸಿದ್ದು ಇದೇ ರೀತಿಯ ತಂತ್ರ. ವಿರೋಧಿಗಳು `ಇಂದಿರಾ ಹಟಾವೋ' ಎನ್ನುವ ಘೋಷಣೆ ಕೂಗುತ್ತಿದ್ದಾಗ `ಗರೀಬಿ ಹಟಾವೋ' ಎನ್ನುವ ಮಂತ್ರ ಪಠಿಸಿ ಇಂದಿರಾ ಮತ್ತೆ ಅಧಿಕಾರಕ್ಕೇರಿದ್ದರು. ಈಗ ರಾಹುಲ್ ಬಣವೂ ಅದೇ ರೀತಿಯ ತಂತ್ರಗಾರಿಕೆ ಹೆಣೆದಿದೆ. ಸದ್ಯದಲ್ಲೇ ರಾಹುಲ್‍ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಪಟ್ಟ ಕಟ್ಟಲಾಗುವುದು. ಆ ಬಳಿಕ ಆಮ್ ಆದ್ಮಿಯಂತೆ ಎಲ್ಲ ಧರ್ಮಗಳ ಬಡವರ ಪರ ಪಕ್ಷ ಎಂಬ ಸಿದ್ಧಾಂತದೊಡನೆ ಪಕ್ಷವನ್ನು ಪುನರ್ ರಚಿಸಲು ರಾಹುಲ್ ಬಣ ಚಿಂತನೆ ನಡೆಸಿದೆ.
ರೈತರ ಸಾಲ ಮನ್ನಾ, ಉದ್ಯೋಗ ಖಾತ್ರಿ ಯೋಜನೆ, ಆಹಾರಭದ್ರತೆ ಕಾಯಿದೆ, ಮತ್ತು ಭೂಸ್ವಾಧೀನ ಪರಿಹಾರ ಮೊತ್ತದ ಹೆಚ್ಚಳ , ಮತ್ತು ಪುನರ್ವಸತಿ ಯೋಜನೆಗಳು ಕಾಂಗ್ರೆಸ ಬಡವರ ಪರ ತಂದ ಯೋಜನೆಗಳು ಎಂದು ಬ್ರಾಂಡ್ ಮಾಡಲು ಹೊರಟಿದೆ.